ADVERTISEMENT

ಕೊರೊನಾ ಸೇನಾನಿ ನರ್ಸ್‌ ಕುಟುಂಬಕ್ಕೆ ₹ 1ಕೋಟಿ ಗೌರವಧನ ಘೋಷಿಸಿದ ದೆಹಲಿ ಸರ್ಕಾರ

ಪಿಟಿಐ
Published 31 ಮೇ 2023, 20:08 IST
Last Updated 31 ಮೇ 2023, 20:08 IST
ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌
ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌   

ನವದೆಹಲಿ: ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಮುಂಚೂಣಿಯಲ್ಲಿ ಕಾರ್ಯನಿರ್ವಹಿಸಿ ಮೃತರಾಗಿದ್ದ ನರ್ಸ್‌ ಗಾಯತ್ರಿ ಶರ್ಮ ಅವರ ಕುಟುಂಬಕ್ಕೆ ದೆಹಲಿ ಸರ್ಕಾರ ₹1 ಕೋಟಿ ಗೌರವಧನವನ್ನು ಘೋಷಿಸಿದೆ.

ಆರೋಗ್ಯ ಸಚಿವ ಸೌರಭ್‌ ಭಾರದ್ವಾಜ್‌ ಅವರು ಮಂಗಳವಾರ ನರ್ಸ್ ಗಾಯತ್ರಿ ಅವರ ಕುಟುಂಬವರನ್ನು ಭೇಟಿ ಮಾಡಿದರು. ಬಳಿಕ ಮಾತನಾಡಿದ ಅವರು, ‘ಗಾಯತ್ರಿ ಅವರು ತಮ್ಮ ಸೇವಾ ಅವಧಿಯಲ್ಲಿ ಆರೋಗ್ಯ ಇಲಾಖೆಗಾಗಿ ದುಡಿದಿದ್ದಾರೆ. ನಿಸ್ವಾರ್ಥವಾಗಿ ಜನರ ಸೇವೆ ಮಾಡಿದ್ದಾರೆ. ಅವರ ಜೀವನದ ಮೌಲ್ಯವನ್ನು  ಅಳೆಯಲು ಸಾಧ್ಯವಿಲ್ಲ. ಆ‌ದರೆ ಈ ಗೌರವಧನವು ಕೊರೊನಾ ಯೋಧರ ತ್ಯಾಗಕ್ಕೆ ಕೇಜ್ರಿವಾಲ್ ಸರ್ಕಾರದ ಗೌರವವಾಗಿದೆ’ ಎಂದರು.

1998ರಿ‌ಂದ ಜಿಟಿಬಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಗಾಯತ್ರಿ ಅವರನ್ನು ಕೋವಿಡ್‌ ಸಾಂಕ್ರಾಮಿಕ ಸಂದರ್ಭದಲ್ಲಿ ಗಾಜಿಪುರ ಆರೋಗ್ಯ ಕೇಂದ್ರಕ್ಕೆ ನಿಯೋಜಿಸಲಾಗಿತ್ತು. 2024ರ ಜನವರಿಯಲ್ಲಿ ಇವರು ನಿವೃತ್ತಿ ಆಗಲಿದ್ದರು. ಆದರೆ ಸೇವೆ ಸಂದರ್ಭದಲ್ಲಿ ಕೋವಿಡ್‌ಗೆ ತುತ್ತಾಗಿದ್ದರು.

ADVERTISEMENT

ಗಾಯತ್ರಿ ಅವರಿಗೆ ಪತಿ ಯಜ್ಞದತ್‌ ಶರ್ಮ, ಪುತ್ರ, ಪುತ್ರಿ ಇದ್ದಾರೆ. ಪುತ್ರಿ ಮೇಘಾ ಸ್ನಾತಕೋತ್ತರ ಪದವಿ ಅಧ್ಯಯನ ಮಾಡುತ್ತಿದ್ದು, ಪುತ್ರ ಗೌತಮ್‌ ಹಿಂದು ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಾರೆ ಎಂದು ಆರೋಗ್ಯ ಇಲಾಖೆಯ ಹೇಳಿಕೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.