ನವದೆಹಲಿ: ಕೋವಿಡ್ ಪರಿಸ್ಥಿತಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರರಾಜಧಾನಿಯಲ್ಲಿ ಆಮ್ಲಜನಕ ಸಂಗ್ರಹ ಬ್ಯಾಂಕ್ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಿಳಿಸಿದ್ದಾರೆ.
ಪ್ರತಿ ಜಿಲ್ಲೆಗಳನ್ನೂ ಒಳಗೊಂಡಂತೆ ಕನಿಷ್ಠ 200 ಆಮ್ಲಜನಕ ಸಂಗ್ರಹ ಬ್ಯಾಂಕ್‌ಗಳನ್ನು ಇಂದಿನಿಂದಲೇ ಸ್ಥಾಪಿಸಲಾಗುವುದು. ಮನೆಯಲ್ಲೇ ಆರೈಕೆ ಪಡೆಯುತ್ತಿರುವ ಸೋಂಕಿತರ ಮನೆಬಾಗಿಲಿಗೆ ಆಮ್ಲಜನಕ ಸಿಲಿಂಡರ್‌ಗಳನ್ನು ನಮ್ಮ ತಂಡವು ತಲುಪಿಸಲಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಸೋಂಕಿತರಿಗೆ ಸಕಾಲದಲ್ಲಿ ಆಮ್ಲಜನಕ ದೊರೆಯುವುದು ಬಹುಮುಖ್ಯವಾಗಿದೆ. ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರನ್ನು ಗಮನದಲ್ಲಿಟ್ಟುಕೊಂಡು ಈ ಬ್ಯಾಂಕುಗಳನ್ನು ಸ್ಥಾಪಿಸಲಾಗುತ್ತಿದೆ. ಸೋಂಕಿತರು ಅಗತ್ಯವಿದೆ ಎಂದು ತಿಳಿಸಿದ ಎರಡು ಗಂಟೆಗಳ ಒಳಗಾಗಿ ಅವರ ಮನೆಗೆ ಆಮ್ಲಜನಕ ಪೂರೈಕೆ ಮಾಡಲಾಗುವುದು. ವಿತರಣೆ ಮಾಡುವ ತಂಡದ ಜೊತೆ ತಂತ್ರಜ್ಞರು ಇರಲಿದ್ದಾರೆ. ಅವರು ಆಮ್ಲಜನಕವನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ಸೋಂಕಿತರಿಗೆ ಮಾಹಿತಿ ನೀಡಲಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಸೋಂಕಿತರ ಜೊತೆ ವೈದ್ಯರು ನಿರಂತರ ಸಂಪರ್ಕದಲ್ಲಿದ್ದಾರೆ. ಅಗತ್ಯವಿದ್ದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಿದ್ದಾರೆ. ಆಮ್ಲಜನಕವನ್ನು ಮನೆಗೆ ಕಳುಹಿಸಿಕೊಡುವ ಮುನ್ನ ಸೋಂಕಿತರಿಗೆ ನಿಜವಾಗಿಯೂ ಅಗತ್ಯವಿದೆಯೇ ಎಂಬುದನ್ನು ವೈದ್ಯರು ಪರಿಶೀಲಿಸಲಿದ್ದಾರೆ.
ಆಮ್ಲಜನಕ ಸಂಗ್ರಹ ಬ್ಯಾಂಕ್ ಸ್ಥಾಪಿಸುವ ಯೋಜನೆಗೆ ನೆರವು ನೀಡಿದ್ದಕ್ಕಾಗಿ ಓಲಾ ಪೌಂಡೇಶನ್ ಮತ್ತು ಇಂಡಿಯಾ ಸಂಸ್ಥೆಗಳಿಗೆ ಕೇಜ್ರಿವಾಲ್ ಧನ್ಯವಾದ ಸಮರ್ಪಿಸಿದ್ದಾರೆ.
ದೆಹಲಿಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 24 ಗಂಟೆ ಅವಧಿಯಲ್ಲಿ ಕೇವಲ ಆರೂವರೆ ಸಾವಿರ ಪ್ರಕರಣಗಳಷ್ಟೇ ವರದಿಯಾಗಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.