ನವದೆಹಲಿ (ಪಿಟಿಐ): ನ್ಯಾಯಮೂರ್ತಿ ಯಶವಂತ್ ವರ್ಮ ಅವರು ತಮ್ಮ ನಿವಾಸದಲ್ಲಿ ಭಾರಿ ಪ್ರಮಾಣದಲ್ಲಿ ನಗದು ಪತ್ತೆಯಾಗಿದೆ ಎಂಬ ಆರೋಪಗಳನ್ನು ಖಡಾಖಂಡಿತವಾಗಿ ಅಲ್ಲಗಳೆದಿದ್ದಾರೆ.
ಮನೆಯ ಸ್ಟೋರ್‌ರೂಮ್‌ನಲ್ಲಿ
ತಾವಾಗಲಿ, ತಮ್ಮ ಕುಟುಂಬದ ಇತರ ಸದಸ್ಯರಾಗಲಿ ನೋಟುಗಳನ್ನು ಇರಿಸಿರಲಿಲ್ಲ ಎಂದು ಹೇಳಿದ್ದಾರೆ.
ದೆಹಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರಿಗೆ ತಮ್ಮ ಹೇಳಿಕೆ ಸಲ್ಲಿಸಿರುವ ನ್ಯಾಯಮೂರ್ತಿ ವರ್ಮ, ತಮಗೆ ಕಳಂಕ ಅಂಟಿಸುವ ಉದ್ದೇಶದಿಂದ ನಗದು ಪತ್ತೆ ಆರೋಪವನ್ನು ಹೊರಿಸಲಾಗಿದೆ ಎಂದು ದೂರಿದ್ದಾರೆ.
‘ಪೊಲೀಸ್ ಆಯುಕ್ತರು ನಿಮ್ಮ ಜೊತೆ ಹಂಚಿಕೊಂಡಿದ್ದ ವಿಡಿಯೊ ಮತ್ತು ಚಿತ್ರಗಳನ್ನು ನಾನು ಹೈಕೋರ್ಟ್‌ನ ಅತಿಥಿ
ಗೃಹದಲ್ಲಿ ನಿಮ್ಮನ್ನು ಭೇಟಿಯಾದಾಗ ಮೊದಲ ಬಾರಿಗೆ ತೋರಿಸಲಾಯಿತು. ವಿಡಿಯೊದಲ್ಲಿ ಇದ್ದುದನ್ನು ಕಂಡು ನನಗೆ ಆಘಾತವಾಯಿತು. ಏಕೆಂದರೆ ನಾನು ಕಂಡಂತೆ ಆ ಜಾಗದಲ್ಲಿ ಇಲ್ಲದಿದ್ದು
ದನ್ನು ಆ ವಿಡಿಯೊದಲ್ಲಿ ತೋರಿಸಲಾಗಿದೆ’ ಎಂದು ವರ್ಮ ಅವರು ಉಪಾಧ್ಯಾಯ ಅವರಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ.
‘ಇದು ನನ್ನ ಹೆಸರಿಗೆ ಕಳಂಕ ಅಂಟಿಸಲು ಮಾಡಿರುವ ಪಿತೂರಿಯಂತೆ ಕಾಣುತ್ತಿದೆ’ ಎಂದು ಅವರು ಹೇಳಿದ್ದಾರೆ.
ಮಾಧ್ಯಮಗಳು ಆರೋಪ ಹೊರಿಸುವ ಮುನ್ನ ಹಾಗೂ ತಮ್ಮನ್ನು ಕಳಂಕಿತರನ್ನಾಗಿಸುವ ಮುನ್ನ ಒಂದಿಷ್ಟು ವಿಚಾರಣೆ ನಡೆಸಬೇಕಿತ್ತು. ಮನೆಯ ಹೊರಗೆ ಇರುವ ಸ್ಟೋರ್‌ರೂಮ್
ನಲ್ಲಿ ನಗದು ಇದ್ದ ಬಗ್ಗೆ ತಮಗೆ ಅರಿವಿಲ್ಲ ಎಂದು ಅವರು ವಿವರಿಸಿದ್ದಾರೆ.
‘ನಗದಿನ ಬಗ್ಗೆ ನನಗಾಗಲಿ, ನನ್ನ ಕುಟುಂಬದ ಸದಸ್ಯರಿಗಾಗಲಿ ಯಾವುದೇ ಮಾಹಿತಿ ಇಲ್ಲ... ಆ ರಾತ್ರಿ ಅಲ್ಲಿದ್ದ ನನ್ನ ಕುಟುಂಬದವರಿಗೆ ಅಥವಾ ನನ್ನ ಸಿಬ್ಬಂದಿಗೆ ನಗದನ್ನು ತೋರಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ.
ಸ್ಟೋರ್‌ರೂಮ್ ಅನ್ನು ಸಾಮಾನ್ಯವಾಗಿ ಎಲ್ಲರೂ ಉಪಯೋಗಿಸು ತ್ತಾರೆ. ಅಲ್ಲಿ ಬಳಕೆ ಮಾಡದ ಕೆಲವು ಪೀಠೋಪಕರಣ, ಬಾಟಲಿಗಳು, ಮ್ಯಾಟ್ರೆಸ್‌ಗಳು, ಹಳೆಯ ಕಾರ್ಪೆಟ್‌ಗಳು, ಉದ್ಯಾನದ ಉಪಕರಣಗಳು ಇವೆ ಎಂದು ಹೇಳಿದ್ದಾರೆ.
‘ಸ್ಟೋರ್‌ರೂಮ್‌ನ ಬಾಗಿಲಿಗೆ ಬೀಗ ಹಾಕಿರುವುದಿಲ್ಲ... ಅದು ಮುಖ್ಯ ನಿವಾಸದಿಂದ ಪ್ರತ್ಯೇಕವಾಗಿದೆ. ಅದು ನನ್ನ ಮನೆಯ ಕೊಠಡಿ ಅಲ್ಲ’ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ವಿಚಾರಣೆಗೆ ಸಮಿತಿ ರಚಿಸಿದ್ದು ಏಕೆ?
ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಅಧಿಕೃತ ನಿವಾಸದಲ್ಲಿ ಸುಟ್ಟ ನೋಟಿನಂತಹ ವಸ್ತುಗಳ ಕಂತೆ ಇದ್ದ ವಿಡಿಯೊವನ್ನು ದೆಹಲಿ ಪೊಲೀಸ್ ಆಯುಕ್ತರು ನೀಡಿದ್ದು ಹಾಗೂ ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ವಿಚಾರಣಾ ವರದಿಯಲ್ಲಿ ‘ಆಳವಾದ ತನಿಖೆ’ ಆಗಬೇಕು ಎಂದು ಹೇಳಿರುವುದು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರು ಮೂವರು ಸದಸ್ಯರ ಸಮಿತಿ ರಚಿಸಲು ಕಾರಣ.
ನ್ಯಾಯಮೂರ್ತಿ ಉಪಾಧ್ಯಾಯ ಅವರು ವಿಚಾರಣೆ ನಡೆಸಿ ಸಿದ್ಧಪಡಿಸಿರುವ ವರದಿಯನ್ನು ಸುಪ್ರೀಂ ಕೋರ್ಟ್ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ನ್ಯಾಯಮೂರ್ತಿ ವರ್ಮ ಅವರ ಅಧಿಕೃತ ನಿವಾಸದಲ್ಲಿ ಅರೆಬರೆ ಸುಟ್ಟಿದ್ದ ಭಾರತದ ಕರೆನ್ಸಿ ನೋಟಿನ ನಾಲ್ಕು–ಐದು ಕಂತೆಗಳು ಸಿಕ್ಕಿವೆ ಎಂಬುದಾಗಿ ಹೇಳುವ ಅಧಿಕೃತ ಸಂವಹನದ ಬಗ್ಗೆ ಉಲ್ಲೇಖ ವರದಿಯಲ್ಲಿದೆ.
‘ಇಡೀ ಪ್ರಕರಣದ ಬಗ್ಗೆ ಆಳವಾದ ತನಿಖೆ ಆಗಬೇಕಾದ ಅಗತ್ಯವಿದೆ ಎಂದು ನನಗೆ ಮೇಲ್ನೋಟಕ್ಕೆ ಅನ್ನಿಸುತ್ತಿದೆ’ ಎಂದು ನ್ಯಾಯಮೂರ್ತಿ ಉಪಾಧ್ಯಾಯ ಅವರು ವರದಿಯಲ್ಲಿ ಹೇಳಿದ್ದಾರೆ.
ದೆಹಲಿ ಪೊಲೀಸ್ ಆಯುಕ್ತ ಸಂಜಯ್ ಅರೋರ ಅವರು ನ್ಯಾಯಮೂರ್ತಿ ಉಪಾಧ್ಯಾಯ ಅವರೊಂದಿಗೆ ಹಂಚಿಕೊಂಡಿರುವ ವಿಡಿಯೊದಲ್ಲಿಯೂ, ನೋಟುಗಳಂತೆ ಕಾಣುವ ವಸ್ತು ಸುಟ್ಟಿರುವುದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ಆರಿಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.