ನವದೆಹಲಿ: ದೆಹಲಿ ಗಲಭೆ ಜೊತೆ ನಂಟಿನ ಭಯೋತ್ಪಾದಕ ಕೃತ್ಯ ಪ್ರಕರಣಕ್ಕೆ ಸಂಬಂಧಿಸಿ ಐದು ವರ್ಷಗಳು ಗತಿಸಿದರೂ ವಾದ ಪೂರ್ಣಗೊಂಡಿಲ್ಲ. ಹೀಗಾಗಿ, ಆರೋಪಿಗಳು ಎಷ್ಟು ಕಾಲ ಸೆರೆವಾಸ ಅನುಭವಿಸಬೇಕು ಎಂದು ದೆಹಲಿ ಪೊಲೀಸರನ್ನು ದೆಹಲಿ ಹೈಕೋರ್ಟ್ ಮಂಗಳವಾರ ಪ್ರಶ್ನಿಸಿದೆ.
ಈ ಪ್ರಕರಣದ ಆರೋಪಿಗಳಲ್ಲೊಬ್ಬರಾದ ತಸ್ಲೀಮ್ ಅಹ್ಮದ್ ಅವರ ಜಾಮೀನು ಅರ್ಜಿ ವಿಚಾರಣೆ ವೇಳೆ, ನ್ಯಾಯಮೂರ್ತಿಗಳಾದ ಸುಬ್ರಮಣಿಯಮ್ ಪ್ರಸಾದ ಮತ್ತು ಹರೀಶ ವೈದ್ಯನಾಥನ್ ಶಂಕರ್ ಅವರು ಇದ್ದ ನ್ಯಾಯಪೀಠ ಈ ಪ್ರಶ್ನೆಯನ್ನು ಮುಂದಿಟ್ಟಿತು.
ದೆಹಲಿಯಲ್ಲಿ 2020ರಲ್ಲಿ ಗಲಭೆ ಸೃಷ್ಟಿಸಲು ಪಿತೂರಿ ನಡೆಸಿದ ಆರೋಪದಡಿ ತಸ್ಲೀಮ್ ಅಹ್ಮದ್ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲಾಗಿದೆ.
‘ಈ ಪ್ರಕರಣದಲ್ಲಿ ಐದು ವರ್ಷಗಳು ಗತಿಸಿದರೂ ವಾದ ಪೂರ್ಣಗೊಂಡಿಲ್ಲ. 700 ಮಂದಿ ಸಾಕ್ಷಿಗಳು ಇದ್ದಾರೆ. ಹೀಗಾದಲ್ಲಿ ಒಬ್ಬ ವ್ಯಕ್ತಿಯನ್ನು ಎಷ್ಟು ದಿನ ಜೈಲಿನಲ್ಲಿ ಇರಿಸಲು ಸಾಧ್ಯ’ ಎಂದು ಪ್ರಾಸಿಕ್ಯೂಶನ್‌ಗೆ ನ್ಯಾಯಪೀಠ ಪ್ರಶ್ನಿಸಿತು.
ತಸ್ಲೀಮ್ ಅಹ್ಮದ್ ಪರ ಹಾಜರಿದ್ದ ವಕೀಲ ಮೆಹಮೂದ್ ಪ್ರಾಚಾ, ‘ವಾದ ಮಂಡನೆಯಲ್ಲಿ ವಿಳಂಬವಾಗುತ್ತಿದೆ ಎಂಬ ಆಧಾರದಡಿ, ಇದೇ ಪ್ರಕರಣದಲ್ಲಿ ಆರೋಪಿಗಳಾಗಿರುವ ದೇವಾಂಗನಾ ಕಲಿಟ, ಆಸಿಫ್ ಇಕ್ಬಾಲ್ ತನ್ಹಾ ಹಾಗೂ ನಟಾಶ ನರ್ವಾಲ್ ಅವರಿಗೆ 2021ರಲ್ಲಿ ಜಾಮೀನು ನೀಡಲಾಗಿದೆ’ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
‘ನನ್ನ ಕಕ್ಷಿದಾರನನ್ನು 2020ರ ಜೂನ್ 24ರಂದು ಬಂಧಿಸಲಾಗಿದ್ದು, ಐದು ವರ್ಷಗಳನ್ನು ಜೈಲಿನಲ್ಲಿ ಕಳೆದಿದ್ದಾರೆ. ನನ್ನ ಕಕ್ಷಿದಾರ ಸಹಕರಿಸುತ್ತಿದ್ದು, ಅವರಿಂದ ವಿಚಾರಣೆಯೂ ವಿಳಂಬ ಆಗಿಲ್ಲ. ಆದರೂ, ಜಾಮೀನು ದೊರೆಯುತ್ತಿಲ್ಲ’ ಎಂದೂ ತಿಳಿಸಿದರು.
ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಬುಧವಾರ ಮುಂದುವರಿಸುವುದಾಗಿ ಹೇಳಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.