ADVERTISEMENT

40 ಹಿಂದಿನ ಭ್ರಷ್ಟಾಚಾರ ಪ್ರಕರಣ; 90ರ ವೃದ್ಧನಿಗೆ ರಿಲೀಫ್ ನೀಡಿದ ದೆಹಲಿ ಹೈಕೋರ್ಟ್

ಪಿಟಿಐ
Published 10 ಜುಲೈ 2025, 13:23 IST
Last Updated 10 ಜುಲೈ 2025, 13:23 IST
<div class="paragraphs"><p>ದೆಹಲಿ ಹೈಕೋರ್ಟ್</p></div>

ದೆಹಲಿ ಹೈಕೋರ್ಟ್

   

ನವದೆಹಲಿ: 1984ರ ಭ್ರಷ್ಟಾಚಾರ ಪ್ರಕರಣದಲ್ಲಿ ದೋಷಿಯಾಗಿರುವ 90ರ ವೃದ್ಧನ ಶಿಕ್ಷೆಯ ಪ್ರಮಾಣವನ್ನು ಒಂದು ದಿನಕ್ಕೆ ಇಳಿಸಿರುವ ದೆಹಲಿ ಹೈಕೋರ್ಟ್‌, ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿರುವ ವಿಳಂಬವು, ತ್ವರಿತ ವಿಚಾರಣೆಯಾಗಬೇಕು ಎಂಬ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ಸ್ಟೇಟ್‌ ಟ್ರೇಡಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾದ ನಿವೃತ್ತ ಅಧಿಕಾರಿ ಸುರೇಂದ್ರ ಕುಮಾರ್ ಎಂಬವರೇ ಶಿಕ್ಷೆಗೆ ಗುರಿಯಾಗಿದ್ದವರು.

ADVERTISEMENT

ವಿಚಾರಣೆ ನಡೆಸಿರುವ ನ್ಯಾ. ಜಸ್ಮೀತ್‌ ಸಿಂಗ್‌, ಪ್ರಕರಣದ ಇತ್ಯರ್ಥಕ್ಕಾಗಿ ವ್ಯಕ್ತಿಯು ತನ್ನ ಭವಿಷ್ಯದ ಬಗ್ಗೆ 40 ವರ್ಷಗಳ ಕಾಲ ಅನಿಶ್ಚಿತತೆ ಅನುಭವಿಸಿರುವುದೇ ನೋವಿನ ಸಂಗತಿ ಎಂದು ಜುಲೈ 8ರಂದು ಹೇಳಿದ್ದಾರೆ.

ಶಿಕ್ಷೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಅರ್ಜಿದಾರರ ವಯಸ್ಸನ್ನು ಪರಿಗಣಿಸಬೇಕಿದೆ. ಈಗಾಗಲೇ 90 ವರ್ಷ ವಯಸ್ಸಾಗಿರುವ ಅವರನ್ನು ಸೆರೆಮನೆಯಲ್ಲಿ ಇರಿಸುವುದರಿಂದ, ದೈಹಿಕ ಹಾಗೂ ಮಾನಸಿಕ ಗಂಭೀರ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಹಾಗಾಗಿ, ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡುವುದಕ್ಕೆ ತಕ್ಕುದಾದ ಪ್ರಕರಣ ಇದಾಗಿದೆ. ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ವ್ಯಾಪಾರ ಚಟುವಟಿಕೆಗೆ ಅವಕಾಶ ಕಲ್ಪಿಸಲು ₹ 15 ಸಾವಿರ ಲಂಚ ನೀಡುವಂತೆ ಉದ್ಯಮವೊಂದಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಕುಮಾರ್ ಅವರನ್ನು 1984ರಲ್ಲಿ ಬಂಧಿಸಲಾಗಿತ್ತು. ಸ್ವಲ್ಪ ಸಮಯದ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಆದರೆ, ಈ ಪ್ರಕರಣದಲ್ಲಿ ಅವರು ದೋಷಿ ಎಂಬುದು 2002ರಲ್ಲಿ ಸಾಬೀತಾಗಿತ್ತು. ವಿಚಾರಣಾ ನ್ಯಾಯಾಲಯವು ಮೂರು ವರ್ಷ ಜೈಲು ಹಾಗೂ ₹ 15,000 ದಂಡ ವಿಧಿಸಿ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.

ಕುಮಾರ್ ದಂಡವನ್ನು ಭರಿಸಿದ್ದಾರೆ ಎಂಬುದನ್ನು ಉಲ್ಲೇಖಿಸಿರುವ ಹೈಕೋರ್ಟ್‌, ವಿಚಾರಣಾ ಪ್ರಕ್ರಿಯೆಯಲ್ಲಿನ ಅತಿಯಾದ ವಿಳಂಬವು, ತ್ವರಿತ ವಿಚಾರಣೆಗೆ ಆದೇಶಿಸುವ ಸಂವಿಧಾನದ 21ನೇ ವಿಧಿಯ ಆಶಯಕ್ಕೆ ವಿರುದ್ಧವಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.