ನವದೆಹಲಿ: ಮಹಿಳೆಯ ಸ್ನೇಹಿತನಾದ ಮಾತ್ರಕ್ಕೆ ಆಕೆಯ ಒಪ್ಪಿಗೆ ಇಲ್ಲದೆ ಲೈಂಗಿಕ ಸಂಬಂಧ ಹೊಂದುವ ಹಕ್ಕು ಪುರುಷನಿಗೆ ಇಲ್ಲ. ಆಕೆ ಅಪ್ರಾಪ್ತ ವಯಸ್ಸಿನವಳಾಗಿದ್ದರೆ ಸಮ್ಮತಿ ಪಡೆದರೂ ಅದು ಕಾನೂನಿಗೆ ವಿರುದ್ಧವಾದದ್ದು ಎಂದು ದೆಹಲಿ ಹೈಕೋರ್ಟ್ ಆದೇಶ ಹೊರಡಿಸಿದೆ.
ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿತು.
‘ಬಾಲಕಿಯ ಒಪ್ಪಿಗೆ ಪಡೆದೇ ಆಕೆಯೊಂದಿಗೆ ಲೈಂಗಿಕ ಸಂಪರ್ಕ ಬೆಳೆಸಿದ್ದೇನೆ’ ಎಂಬ ಆರೋಪಿಯ ಹೇಳಿಕೆಯನ್ನು ನ್ಯಾಯಮೂರ್ತಿ ಗಿರೀಶ್ ಕಟ್ಪಾಲಿಯಾ ತಿರಸ್ಕರಿಸಿದರು. ಆಕೆ ಬಾಲಕಿಯಾಗಿರುವುದರಿಂದ ಸಮ್ಮತಿ ಪಡೆದರೂ ಅದು ಕಾನೂನುಬದ್ಧವಲ್ಲ ಎಂದು ಹೇಳಿದರು.
ನಯವಾದ ಮಾತುಗಳಿಂದ ಆರೋಪಿಯು ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾನೆ. ಬಾಲಕಿಯ ಒಪ್ಪಿಗೆ ಇಲ್ಲದಿದ್ದರೂ ವ್ಯಕ್ತಿಯು ಹಲವು ಬಾರಿ ಆಕೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದಾಖಲಾಗಿದೆ ಎಂದು ನ್ಯಾಯಾಲಯ ಒತ್ತಿ ಹೇಳಿತು.
‘ಹೀಗಾಗಿ ಇದು ಒಮ್ಮತದ ಸಂಬಂಧ ಎಂದು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಆರೋಪಿಗೆ ಜಾಮೀನು ನೀಡಲು ಇದು ಸೂಕ್ತ ಪ್ರಕರಣವಲ್ಲ’ ಎಂದು ಆದೇಶಿಸಿತು.
ವಿಕಾಸಪುರಿಯಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದ ಕಾರ್ಮಿಕ, ಬಾಲಕಿಯೊಂದಿಗೆ ಸ್ನೇಹ ಬೆಳೆಸಿಕೊಂಡು ಆಕೆ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ. ಎಂದು ಪ್ರಾಸಿಕ್ಯೂಷನ್ ಆರೋಪಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.