ADVERTISEMENT

ದೆಹಲಿಯಲ್ಲಿ ಡೆಂಗ್ಯೂ ಉಲ್ಬಣ: ಆಸ್ಪತ್ರೆಯ ನೆಲದ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಅಕ್ಟೋಬರ್ 2021, 11:59 IST
Last Updated 21 ಅಕ್ಟೋಬರ್ 2021, 11:59 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು ಆರೋಗ್ಯ ಇಲಾಖೆಗೆಸವಾಲಾಗಿ ಪರಿಣಮಿಸಿದೆ.ರೋಗಿಗಳು ಮತ್ತು ಸಂಬಂಧಿಕರಿಂದ ಆಸ್ಪತ್ರೆಗಳು ತುಂಬಿರುವ ದೃಶ್ಯ ಕಂಡುಬರುತ್ತಿವೆ.

ಸಫ್ದರ್‌ಜಂಗ್‌ನಲ್ಲಿರುವ ‌ವೈದ್ಯಕೀಯ ವಿಭಾಗದ ಆಸ್ಪತ್ರೆಯ13ನೇ ವಾರ್ಡ್‌ನಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದ್ದು, ನೆಲ ಹಾಗೂ ಕಾರಿಡಾರ್‌ ಮೇಲೆಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಹಾಸಿಗೆ ಹಂಚಿಕೊಂಡಿರುವುದು ಕಂಡು ಬಂದಿದೆ ಎಂದುದಿ ಇಂಡಿಯನ್ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

ವಾರ್ಡ್‌ನ ನೆಲದಲ್ಲಿ ಮತ್ತು ಕಾರಿಡಾರ್‌ ಮೇಲೆ ಉಳಿದುಕೊಂಡಿರುವ ರೋಗಿಗಳಿಗೆವೈದ್ಯರು ಅಲ್ಲಿಯೇ ಚಿಕಿತ್ಸೆ ಮುಂದವರಿಸಿದ್ದಾರೆ. ರೋಗಿಗಳ ಹೊದಿಕೆಗಳು ಮತ್ತು ಇತರ ವಸ್ತುಗಳು ವಾರ್ಡ್‌ನಲ್ಲಿ ಹರಡಿಕೊಂಡಿವೆ. ವಾರ್ಡ್‌ನ ಹೊರಗೆ ಮತ್ತು ಒಳಗೆ ರೋಗಿಗಳೊಂದಿಗೆ ಬಂದಿರುವವರು ಇದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ಈ ಬಗ್ಗೆ ಮಾತನಾಡಿರುವವೈದ್ಯಕೀಯವಿಭಾಗದ ಪ್ರೊಫೆಸರ್‌ ಡಾ. ಬಿ.ಕೆ. ತ್ರಿಪಾಠಿ, ರೋಗಿಗಳು ಆಸ್ಪತ್ರೆಯ ನೆಲದ ಮೇಲೆ ಮಲಗುವುದು ಮತ್ತು ಹಾಸಿಗೆ ಹಂಚಿಕೊಳ್ಳುವುದು ಹೊಸದೇನಲ್ಲ. ಆದರೂ, ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿರುವುದು ವೈದ್ಯಕೀಯ ವ್ಯವಸ್ಥೆಯ ಮೇಲೆ ಒತ್ತಡ ಹೆಚ್ಚಿಸಿವೆ ಎಂದು ತಿಳಿಸಿದ್ದಾರೆ.

ಡೆಂಗ್ಯೂ ಹಾಗೂ ಇತರ ವೈರಲ್‌ ಜ್ವರದಿಂದ ಬಳಲುತ್ತಿರುವರಿಗಾಗಿ ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡ್‌ ರಚಿಸಿಲ್ಲ.13 ಇತರ ರೋಗಿಗಳೂ ಇದೇ ವಾರ್ಡ್‌ನಲ್ಲಿದ್ದಾರೆ.

ʼಪ್ರತಿದಿನ40 ರಿಂದ 60 ಪ್ರಕರಣಗಳು ವರದಿಯಾಗುತ್ತಿದ್ದಾಗ ಪ್ರತ್ಯೇಕ ವಾರ್ಡ್‌ ತೆರೆದಿದ್ದೆವು. ಪ್ರಕರಣಗಳು ಹೆಚ್ಚಾದರೆ, ಇನ್ನು ಒಂದು ಅಥವಾ ಎರಡು ವಾರದಲ್ಲಿ ಡೆಂಗ್ಯೂ ಸೋಂಕಿತರಿಗಾಗಿ ಪ್ರತ್ಯೇಕ ವಾರ್ಡ್‌ ತೆರೆಯುತ್ತೇವೆʼ ಎಂದು ತ್ರಿಪಾಠಿ ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿರುವಮೂರು ವಾರ್ಡ್‌ಗಳೂ ತಲಾ52 ರಿಂದ 54 ರೋಗಿಗಳ ಸಾಮರ್ಥ್ಯವನ್ನು ಹೊಂದಿವೆ. ಹರಿಯಾಣ, ಪಂಜಾಬ್‌ ಮತ್ತು ಉತ್ತರ ಪ್ರದೇಶದ ಪಶ್ಚಿಮ ಜಿಲ್ಲೆಗಳ ರೋಗಿಗಳೂಈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ರೋಗಿಗಳ ದಾಖಲು ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ಮಾತನಾಡಿರುವ ತ್ರಿಪಾಠಿ,ʼತುರ್ತು ಚಿಕಿತ್ಸೆಗಾಗಿ ದಾಖಲಾಗುವ ಮೂರರಲ್ಲಿ ಒಬ್ಬ ರೋಗಿಯನ್ನು ಸಾಮಾನ್ಯ ವಾರ್ಡ್‌ಗಳಿಗೆ ದಾಖಲಿಸುವ ಸಾಧ್ಯತೆ ಇದೆʼ ಎಂದಿದ್ದಾರೆ. ಇದರಿಂದ ಪ್ರಕರಣಗಳು ಮತ್ತಷ್ಟು ಹೆಚ್ಚಾಗುವ ಆತಂಕ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.