
ಬಂಧನ (ಸಾಂದರ್ಭಿಕ ಚಿತ್ರ)
ನವದೆಹಲಿ: ನೋಯ್ಡಾದಿಂದ ದಕ್ಷಿಣ ದೆಹಲಿಯಲ್ಲಿರುವ ಮನೆಗೆ ಮರಳುತ್ತಿದ್ದ ಪತ್ರಕರ್ತೆಯೊಬ್ಬರನ್ನು ಬೆನ್ನಟ್ಟಿ, ಅವರ ಕಾರಿನ ಮೇಲೆ ದಾಳಿ ಮಾಡಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಕೆಲಸ ಮಾಡುತ್ತಿರುವ 35 ವರ್ಷದ ಮಹಿಳೆ, ಅಕ್ಟೋಬರ್ 30ರ ತಡರಾತ್ರಿ ನೋಯ್ಡಾದಲ್ಲಿರುವ ತನ್ನ ಕಚೇರಿಯಿಂದ ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
12:45ರ ಸುಮಾರಿಗೆ ಮಹಾಮಾಯ ಫ್ಲೈಓವರ್‌ನಲ್ಲಿ ಹೋಗುತ್ತಿದ್ದಾಗ, ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾರನ್ನು ಹಿಂಬಾಲಿಸಿ, ಅಡ್ಡಗಟ್ಟಲು ಯತ್ನಿದರು. ಬಳಿಕ ಕಾರನ್ನು ನಿಲ್ಲಿಸುವಂತೆ ನನಗೆ ಸನ್ನೆ ಮಾಡಿದರು. ಆರಂಭದಲ್ಲಿ ಅವರನ್ನು ನಿರ್ಲಕ್ಷಿಸಿದೆ. ಆದರೆ ಅವರು ನನ್ನನ್ನು ಬೆನ್ನಟ್ಟುತ್ತಲೇ ಇದ್ದರು. ಬಳಿಕ ಹಿಂಬದಿ ಸವಾರ ನನ್ನ ವಿಂಡ್‌ಸ್ಕ್ರೀನ್‌ಗೆ ಬಡಿದು ಬಾಗಿಲು ತೆರೆಯಲು ಪ್ರಯತ್ನಿಸಿದ. ಅದು ಸಾಧ್ಯವಾಗದಿದ್ದಾಗ ಆತ ಕೋಲನ್ನು ತೆಗೆದುಕೊಂಡು ಕಾರಿನ ಹಿಂಭಾಗದ ಗಾಜನ್ನು ಪುಡಿಪುಡಿ ಮಾಡಿದ್ದಾನೆ ಎಂದು ಪತ್ರಕರ್ತೆ ಹೇಳಿದ್ದಾರೆ.
ಭಯಭೀತಳಾದ ನಾನು ಸಹೋದ್ಯೋಗಿ ಒಬ್ಬರಿಗೆ ಕರೆ ಮಾಡಿದೆ. ಅವರು ವಾಹನ ನಿಲ್ಲಿಸಬೇಡಿ ಎಂದು ಸಲಹೆ ನೀಡಿದರು. ಲಜಪತ್ ನಗರದ ಕಡೆಗೆ ಆಶ್ರಮ ಫ್ಲೈಓವರ್ ಬಳಿ ತಲುಪುವವರೆಗೂ ವೇಗವಾಗಿ ಕಾರು ಚಾಲನೆ ಮಾಡಿದೆ. ಬಳಿಕ ಟ್ಯಾಕ್ಸಿ ಚಾಲಕರ ಸಹಾಯ ಪಡೆದು ತಡರಾತ್ರಿ 1:30ರ ಸುಮಾರಿಗೆ ಪೊಲೀಸ್ ನಿಯಂತ್ರಣ ಕೊಠಡಿಗೆ (PCR) ಕರೆ ಮಾಡಿದ್ದಾರೆ.
ಲಜಪತ್ ನಗರ ಪೊಲೀಸ್ ಠಾಣೆಯ ತಂಡವೊಂದು ತಕ್ಷಣ ಆಗಮಿಸಿ ಆಕೆಯ ಸುರಕ್ಷತೆಯನ್ನು ಖಚಿತಪಡಿಸಿಕೊಂಡರು. ಘಟನೆ ಸನ್ ಲೈಟ್ ಕಾಲೋನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದರಿಂದ, ಅಲ್ಲಿ ಪ್ರಕರಣ ದಾಖಲಾಗಿದೆ. ಅಪರಾಧಿಗಳನ್ನು ಪತ್ತೆಹಚ್ಚಲು ಹಲವು ತಂಡಗಳನ್ನು ರಚಿಸಲಾಯಿತು. ಮಾರ್ಗ ಮತ್ತು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ, ಕೆಲವೇ ಗಂಟೆಗಳಲ್ಲಿ ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಂಧಿತರನ್ನು ಶುಭಂ ಮತ್ತು ದೀಪಕ್ ಎಂದು ಗುರುತಿಸಲಾಗಿದೆ. ಈ ಇಬ್ಬರೂ ಆರೋಪಿಗಳು ಈ ವರ್ಷದ ಆರಂಭದಲ್ಲಿ ದಾಬ್ರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಶಸ್ತ್ರಾಸ್ತ್ರ ಕಾಯ್ದೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದೂ ಅವರು ತಿಳಿಸಿದ್ದಾರೆ.
ಆರೋಪಿಗಳನ್ನು ವಿಚಾರಣೆ ನಡೆಸಲಾಗುತ್ತಿದ್ದು, ಅವರು ಇಂತಹ ಇತರ ಘಟನೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.