ADVERTISEMENT

ದೆಹಲಿ: ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣದ ಮಾರ್ಗದಲ್ಲಿ ಸದ್ಯದಲ್ಲೇ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 23 ಜೂನ್ 2018, 15:34 IST
Last Updated 23 ಜೂನ್ 2018, 15:34 IST
ದೆಹಲಿ ಮೆಟ್ರೊ
ದೆಹಲಿ ಮೆಟ್ರೊ   

ನವದೆಹಲಿ: ಸರ್.ಎಂ.ವಿಶ್ವೇಶ್ವರಯ್ಯ ಅವರ ಹೆಸರನ್ನು ಹೊಂದಿರುವ ನವದೆಹಲಿಯ ಮೋತಿಬಾಗ್ ಮೆಟ್ರೊ ನಿಲ್ದಾಣ ಸದ್ಯದಲ್ಲೇ ಸಂಚಾರಕ್ಕೆ ತೆರೆಯಲಿದೆ. ಈ ನಿಲ್ದಾಣ ದೆಹಲಿ ಕರ್ನಾಟಕ ಸಂಘದ 'ಬಾಗಿಲಲ್ಲೇ' ಇರುವುದು ವಿಶೇಷ.

ಮಜ್ಲಿಸ್ ಪಾರ್ಕ್‌ನಿಂದ ಶಿವ ವಿಹಾರ್‌ವರೆಗಿನ 59 ಕಿ. ಮೀ. ಉದ್ದದ 'ಪಿಂಕ್ ಲೈನ್' ಮೆಟ್ರೊ ಮಾರ್ಗದ ನಿಲ್ದಾಣಗಳ ಪೈಕಿ ಮೋತಿಬಾಗ್ ನಿಲ್ದಾಣ ಬಹಳ ಮುಖ್ಯವಾದದ್ದು. ವಿಶ್ವೇಶ್ವರಯ್ಯ ಅವರ ಹೆಸರು ಇಡಲು ಕೇಂದ್ರ ಸರ್ಕಾರ ಮತ್ತು ದೆಹಲಿ ಮೆಟ್ರೊ ರೈಲು ನಿಗಮದ ಜತೆ ದೆಹಲಿ ಕರ್ನಾಟಕ ಸಂಘ ಸುದೀರ್ಘ ಪತ್ರವ್ಯವಹಾರ ಮತ್ತು ಸತತ 'ಲಾಬಿ' ನಡೆಸಿತ್ತು.

ಮೆಟ್ರೊ ರೈಲು ನಿಲ್ದಾಣಗಳಿಗೆ ಆಯಾ ಪರಿಸರದ ಹೆಸರನ್ನು ಬಿಟ್ಟು ಇತರ ಹೆಸರನ್ನು ಇಡುವ ಸಂಪ್ರದಾಯ ಆರಂಭದಲ್ಲಿ ಇರಲಿಲ್ಲ. ಆದರೆ ಸಂಘದ ಸಮುಚ್ಛಯದ ಪಕ್ಕದಲ್ಲಿಯೇ ಹಾದುಹೋಗುವ ನಿಲ್ದಾಣಕ್ಕೆ ದೆಹಲಿ ಕರ್ನಾಟಕ ಸಂಘ ನಿಲ್ದಾಣ ಎಂಬ ಹೆಸರಿಡಬೇಕು ಎಂದು ಒತ್ತಾಯಿಸಲಾಗಿತ್ತು. ಸಂಘದ ಹೆಸರು ಅಲ್ಲದಿದ್ದರೆ, ಕನ್ನಡಿಗ ಸಾಧಕನೊಬ್ಬನ ಹೆಸರನ್ನು ಇಡಬೇಕು ಎಂದು ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಮೂಲಕ 2013ರಲ್ಲಿ ಅಂದಿನ ಕೇಂದ್ರ ನಗರಾಡಳಿತ ಸಚಿವ ಕಮಲ್‌ನಾಥ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಸರ್ಕಾರ ಬದಲಾದ ನಂತರ ಪುನಃ ಅಂದಿನ ನಗರಾಡಳಿತ ಸಚಿವ ವೆಂಕಯ್ಯ ನಾಯ್ಡು ಅವರ ಮೇಲೆ ಒತ್ತಡ ತರಲಾಯಿತು..

ADVERTISEMENT

'ಸಂಘದ ಬಾಗಿಲಿಗೆ ಮೆಟ್ರೊ ರೈಲಿನ ಓಡಾಟದ ಆರಂಭ ಸದ್ಯದಲ್ಲಿಯೇ ಆಗಲಿದೆ. ಇದೇ ಏಪ್ರಿಲ್ 24ರಿಂದ ಪ್ರಾಯೋಗಿಕ ಸಂಚಾರ ನಡೆದಿದೆ. ನವದೆಹಲಿಯ ಪ್ರಮುಖ ರಸ್ತೆಯೊಂದರಲ್ಲಿ ಪ್ರಯಾಣಿಸುತ್ತಿರುವಾಗ ವಿಶ್ವೇಶ್ವರಯ್ಯ ಅವರ ಹೆಸರನ್ನು ನೋಡುವುದೇ ಕನ್ನಡಿಗರಾದ ನಮಗೆಲ್ಲ ಬಹಳ ಹೆಮ್ಮೆಯ ಸಂಗತಿ' ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ ಶನಿವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

’ನನ್ನ ಅವಧಿಯಲ್ಲಿ ದೆಹಲಿ ಕರ್ನಾಟಕ ಸಂಘ ₹2 ಕೋಟಿ ಉಳಿತಾಯ ಮಾಡಿದ್ದು, ಉದ್ಯೋಗ ನಿರತ ಮಹಿಳೆಯರು ಮತ್ತು ಸಿವಿಲ್ ಸರ್ವಿಸ್ ಅಧ್ಯಯನ ನಿರತ ಕನ್ನಡದ ಹೆಣ್ಣುಮಕ್ಕಳಿಗೆ ಹಾಸ್ಟೆಲ್ ನಿರ್ಮಾಣಕ್ಕಾಗಿ ಈ ಹಣವನ್ನು ಬಳಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.