ನವದೆಹಲಿ: ಕೇಂದ್ರ ಸರ್ಕಾರವು 2021–22ನೇ ಸಾಲಿನ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯ (ಎಸ್‌ಡಿಆರ್‌ಎಫ್) ಮೊದಲ ಕಂತಿನ ಭಾಗವಾಗಿ ₹ 8,873.60 ಕೋಟಿ ಮಂಜೂರು ಮಾಡಿದೆ.
ಕೋವಿಡ್-19 ನಿವಾರಣೆ ಮತ್ತು ನಿರ್ವಹಣೆ ನಿಟ್ಟಿನಲ್ಲಿ ಆಸ್ಪತ್ರೆಗಳ ಸ್ಥಾಪನೆ, ಆಮ್ಲಜನಕ ಉತ್ಪಾದನೆ, ವೆಂಟಿಲೇಟರ್, ಏರ್ ಪ್ಯೂರಿಫೈಯರ್, ಆಂಬ್ಯುಲೆನ್ಸ್, ಸ್ಕ್ಯಾನರ್‌ಗಳು, ಪಿಪಿಇ ಕಿಟ್, ಪರೀಕ್ಷಾ ಕಿಟ್ ಖರೀದಿ, ಆಕ್ಸಿಜನ್ ಉತ್ಪಾದನೆ ಮತ್ತು ಶೇಖರಣಾ ಘಟಕಗಳ ಸ್ಥಾಪನೆ, ಕೋವಿಡ್–19 ಆರೈಕೆ ಕೇಂದ್ರ ಹಾಗೂ ಪರೀಕ್ಷಾ ಪ್ರಯೋಗಾಲಯ ಸ್ಥಾಪನೆಗಾಗಿ ಈ ಹಣದಲ್ಲಿ ಶೇ 50ರಷ್ಟನ್ನು ಬಳಸಲು ಅನುಮತಿ ನೀಡಲಾಗಿದೆ.
ಕರ್ನಾಟಕಕ್ಕೆ ₹ 310.65 ಕೋಟಿ ಒದಗಿಸಲಾಗಿದ್ದು, ಕೋವಿಡ್‌ನಿಂದ ತತ್ತರಿಸಿರುವ ಮಹಾರಾಷ್ಟ್ರಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ₹ 1,288.80 ಕೋಟಿ ನೀಡಲಾಗಿದೆ.
ಸಾಮಾನ್ಯವಾಗಿ ಜೂನ್‌ನಲ್ಲಿ ಬಿಡುಗಡೆಯಾಗುತ್ತಿದ್ದ ಎಸ್‌ಡಿಆರ್‌ಎಫ್‌ನ ಮೊದಲ ಕಂತನ್ನು ಹಣಕಾಸು ಆಯೋಗದ ಶಿಫಾರಸ್ಸಿನ ಮೇರೆಗೆ ನಿಗದಿತ ಅವಧಿಗಿಂತ ಮೊದಲೇ ಬಿಡುಗಡೆ ಮಾಡುತ್ತಿರುವುದಾಗಿ ಕೇಂದ್ರದ ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಆಯಾ ರಾಜ್ಯಗಳು ಸಾಮಾನ್ಯವಾಗಿ ಈ ಮೊತ್ತವನ್ನು ಬಳಸುವ ಕಾರ್ಯ ವಿಧಾನದಲ್ಲೂ ರಿಯಾಯಿತಿ ನೀಡಲಾಗಿದೆ. ಅಲ್ಲದೆ ಕಳೆದ ವರ್ಷ ಒದಗಿಸಲಾದ ಮೊತ್ತವನ್ನು ಬಳಸಿರುವ ಪ್ರಮಾಣಪತ್ರ ಸಲ್ಲಿಸುವವರೆಗೆ ಕಾಯದೆ ಈ ನಿಧಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.