ADVERTISEMENT

ಕುಸ್ತಿಪಟು ಕೊಲೆ ಪ್ರಕರಣ: ದೆಹಲಿ ಪೊಲೀಸರಿಂದ ಮತ್ತೊಬ್ಬ ಆರೋಪಿ ಬಂಧನ

ಪಿಟಿಐ
Published 6 ಜನವರಿ 2022, 10:33 IST
Last Updated 6 ಜನವರಿ 2022, 10:33 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: 23 ವರ್ಷದ ಕುಸ್ತಿಪಟು ಸಾಗರ್ ಧನಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಗುರುವಾರ ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ.

ದಾಬಸ್ ಗ್ರಾಮದ ನಿವಾಸಿ ಪರ್ವೀನ್ ದಾಬಸ್‌ನನ್ನು ಬಂಧಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಸುಶೀಲ್ ಕುಮಾರ್‌ ಸೇರಿದಂತೆ 13 ಮಂದಿ ಆರೋಪಿಗಳನ್ನು ದೆಹಲಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

ADVERTISEMENT

ಸುಶೀಲ್‌ ಕುಮಾರ್‌ ಪಿತೂರಿ ನಡೆಸಿದ್ದರು ಎಂಬುದಕ್ಕೆ ಸಾಕಷ್ಟು ಸಾಕ್ಷ್ಯ, ಪುರಾವೆಗಳಿವೆ ಎಂದು ದೋಷಾರೋಪ ಪಟ್ಟಿಯಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

38 ವರ್ಷದ ಕುಸ್ತಿಪಟು ಸುಶೀಲ್‌ ಕುಮಾರ್‌ ಅವರನ್ನು 2021ರ ಮೇ 23 ರಂದು ಬಂಧಿಸಲಾಗಿತ್ತು. ಜೂನ್ 2ರಂದು ಅವರನ್ನು ಜೈಲಿಗೆ ರವಾನಿಸಲಾಗಿದೆ.

ಸುಶೀಲ್‌ ಕುಮಾರ್, ಜಾಮೀನು ಕೋರಿ ಹಲವು ಬಾರಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿತ್ತು.

ರಾಷ್ಟ್ರ ರಾಜಧಾನಿ ಛತ್ರಸಾಲ್‌ ಕ್ರೀಡಾಂಗಣದಲ್ಲಿ ಮೇ 4ರಂದು ನಡೆದ ಗಲಾಟೆಯಲ್ಲಿ ಕುಸ್ತಿಪಟು ಸಾಗರ್ ರಾಣಾ ಮತ್ತು ಅವರ ಗೆಳೆಯರಾದ ಸೋನು ಮತ್ತು ಅಮಿತ್ ಕುಮಾರ್‌ ಮೇಲೆ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಇದರಲ್ಲಿ ಸುಶೀಲ್‌ ಮತ್ತು ಅವರ ಸಹಚರರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸಾಗರ್‌ ನಂತರ ಮೃತಪಟ್ಟಿದ್ದರು. ಮೊಂಡಾದ ವಸ್ತುವಿನಿಂದ ಬಿದ್ದ ಪೆಟ್ಟಿನಿಂದ ಮೆದುಳಿಗೆ ಹಾನಿಯುಂಟಾಗಿ ಸಾಗರ್‌ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.