ADVERTISEMENT

ಮುನವ್ವರ್ ಫಾರೂಕಿ ಕಾರ್ಯಕ್ರಮಕ್ಕೆ ಅನುಮತಿ ನಿರಾಕರಿಸಿದ ದೆಹಲಿ ಪೊಲೀಸರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಆಗಸ್ಟ್ 2022, 2:08 IST
Last Updated 27 ಆಗಸ್ಟ್ 2022, 2:08 IST
ಮುನವ್ವರ್ ಫಾರೂಕಿ
ಮುನವ್ವರ್ ಫಾರೂಕಿ   

ನವದೆಹಲಿ:ಕಾಮಿಡಿಯನ್ ಮುನವ್ವರ್ ಫಾರೂಕಿ ಅವರ ಕಾರ್ಯಕ್ರಮಕ್ಕೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಕಾರ್ಯಕ್ರಮವು ಆ ಪ್ರದೇಶದ ಕೋಮು ಸಾಮರಸ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ.

ಆಗಸ್ಟ್ 28ರಂದು ದೆಹಲಿಯಲ್ಲಿ ಮುನವ್ವರ್ ಫಾರೂಕಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿತ್ತು. ಕಾರ್ಯಕ್ರಮವು ಕೋಮು ಸಾಮರಸ್ಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿ ಕೇಂದ್ರ ಜಿಲ್ಲಾ ಪೊಲೀಸರು ದೆಹಲಿ ಪೊಲೀಸ್ ಪರವಾನಗಿ ಘಟಕಕ್ಕೆ ಪತ್ರ ಬರೆದಿದ್ದರು. ಇದನ್ನು ಪರಿಗಣಿಸಿ ಅನುಮತಿ ನಿರಾಕರಿಸಲಾಗಿದೆ ಎಂದು ‘ಎಎನ್‌ಐ’ ವರದಿ ಮಾಡಿದೆ.

ಇತ್ತೀಚೆಗೆ ತೆಲಂಗಾಣದ ಐಟಿ ಮತ್ತು ಉದ್ಯಮ ಖಾತೆ ಸಚಿವ ಕೆ.ಟಿ. ರಾಮರಾವ್ ಅವರ ಆಹ್ವಾನದ ಮೇರೆಗೆ ಮುನವ್ವರ್ ಫಾರೂಕಿ ಹೈದರಾಬಾದ್‌ನಲ್ಲಿ ‘ಡೋಂಗ್ರಿ ಟು ನೋವೇರ್‘ ಕಾರ್ಯಕ್ರಮ ನಡೆಸಿಕೊಟ್ಟಿದ್ದರು. ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಮುನವ್ವರ್ ಕಾರ್ಯಕ್ರಮ ನಡೆಸಿದರೆ, ವೇದಿಕೆಗೆ ಬೆಂಕಿ ಹಚ್ಚುವುದಾಗಿಯೂ, ಫಾರೂಕ್ ಮೇಲೆ ಹಲ್ಲೆ ನಡೆಸುವುದಾಗಿಯೂ ಬಿಜೆಪಿ ಶಾಸಕ ರಾಜಾ ಸಿಂಗ್ ಬೆದರಿಕೆ ಒಡ್ಡಿದ್ದರು. ಬಳಿಕ ಬಿಗಿ ಭದ್ರತೆಯೊಂದಿಗೆ ಕಾರ್ಯಕ್ರಮ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.