ADVERTISEMENT

ಪ್ರತಿಭಟಿಸದಂತೆ ದೆಹಲಿ ಪೊಲೀಸರ ಎಚ್ಚರಿಕೆ: ಪ್ರತಿಭಟಿಸಿಯೇ ಸಿದ್ಧ ಎಂದ ಕಾಂಗ್ರೆಸ್‌

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2022, 12:48 IST
Last Updated 4 ಆಗಸ್ಟ್ 2022, 12:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ನಿಷೇಧಾಜ್ಞೆ ಉಲ್ಲಂಘನೆ ವಿರುದ್ಧ ಕಾಂಗ್ರೆಸ್ ಮುಖಂಡರಿಗೆ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಆದರೂ ಶುಕ್ರವಾರ ಪ್ರಧಾನಿ ನಿವಾಸಕ್ಕೆ ಘೇರಾವ್‌ ಹಾಕಲಾಗುವುದು ಎಂದು ಕಾಂಗ್ರೆಸ್‌ ಪಕ್ಷ ಸ್ಪಷ್ಟಪಡಿಸಿದೆ.

ದರ ಏರಿಕೆ ಖಂಡಿಸಿ ಪಕ್ಷದ ಸಂಸದರು ರಾಷ್ಟ್ರಪತಿ ಭವನ ಚಲೋ ನಡೆಸಲಿದ್ದು, ಪ್ರಧಾನಿ ನಿವಾಸಕ್ಕೂ ಘೇರಾವ್ ಹಾಕುವರು ಎಂದು ಎಂದು ಕಾಂಗ್ರೆಸ್‌ ಪ್ರಕಟಿಸಿತ್ತು. ಹೆರಾಲ್ಡ್‌ ಹೌಸ್‌ನಲ್ಲಿ ಇ.ಡಿ ತಪಾಸಣೆಯನ್ನು ವಿರೋಧಿಸಿ ಈ ಪ್ರತಿಭಟನೆಗೆ ಕರೆ ನೀಡಲಾಗಿದೆ.

ದೆಹಲಿ ಡಿಸಿಪಿ ಅಮೃತಾ ಗುಗುಲೋತ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರಿಗೆ ಪತ್ರ ಬರೆದಿದ್ದು, ಜಂತರ್‌ ಮಂತರ್ ಹೊರತುಪಡಿಸಿ ದೆಹಲಿಯಲ್ಲಿ ಸಿಆರ್‌ಪಿಸಿ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಹೀಗಾಗಿ, ‘ಸುಪ್ರೀಂ ಕೋರ್ಟ್‌ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳ ಅನುಸಾರವೂ 5ರಂದು ಪ್ರತಿಭಟನೆ ನಡೆಸಲು ಅವಕಾಶ ಇರುವುದಿಲ್ಲ. ಇದನ್ನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದೇ ಆದಲ್ಲಿ ಕಾನೂನು ಕ್ರಮವಹಿಸಲಾಗುವುದು’ ಎಂದು ಪತ್ರದಲ್ಲಿ ಎಚ್ಚರಿಸಿದ್ದಾರೆ.

‘ಪತ್ರ ಬಂದಿದೆ. ಪ್ರತಿಭಟಿಸಿದಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ನಾವು ಕಾನೂನು ಕ್ರಮ ಎದುರಿಸಲು ಸಿದ್ಧರಿದ್ದೇವೆ. ಈ ದೇಶದಲ್ಲಿ ಪ್ರತಿಭಟನೆ ನಡೆಸಲು ಸ್ವಾತಂತ್ರ್ಯವಿಲ್ಲವೇ?’ ಎಂದು ಕೆ.ಸಿ.ವೇಣುಗೋಪಾಲ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.