ಅರವಿಂದ ಕೇಜ್ರಿವಾಲ್
ಪಿಟಿಐ ಚಿತ್ರ
ನವದೆಹಲಿ: ಎಎಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಬಿಜೆಪಿ ಗೂಂಡಾಗಿರಿ ಮಾಡುತ್ತಿದೆ. ದೆಹಲಿ ಪೊಲೀಸರು ಈ ಪರಿಸ್ಥಿತಿಯನ್ನು ನಿಭಾಯಿಸಲು ಹೆದರುತ್ತಿದ್ದಾರೆ ಎಂದು ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಸೋಮವಾರ ಹೇಳಿದರು.
ವಿಧಾನಸಭಾ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಇಂದು ಕೇಜ್ರಿವಾಲ್ ಸುದ್ದಿಗಾರರೊಂದಿಗೆ ಮಾತನಾಡಿದರು.
‘ಈ ದೇಶದ ಕಾನೂನಿಗೆ ಹೆದರದ ಈ ದೊಡ್ಡ ಗೂಂಡಾ ಯಾರು? ಪತ್ರಕರ್ತರನ್ನು ಬಂಧಿಸುವ ಮತ್ತು ಎಎಪಿ ಕಾರ್ಯಕರ್ತರು ಮತ್ತು ಬೆಂಬಲಿಗರ ಮೇಲೆ ಬಹಿರಂಗವಾಗಿ ಹಲ್ಲೆ ನಡೆಸುತ್ತಿರುವ ಈ ಗೂಂಡಾ ಯಾರು? ದೆಹಲಿ ಪೊಲೀಸರಿಗೆ ಆದೇಶ ನೀಡುತ್ತಿರುವ, ಭಯ ಮತ್ತು ಅಸಹಾಯಕತೆಯನ್ನು ಅನುಭವಿಸುವಂತೆ ಮಾಡಿರುವ ಈ ಗೂಂಡಾ ಯಾರು?’ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
‘ಒಂದು ಕಡೆ, ಒಂದು ಪಕ್ಷವು ಸಾಮಾನ್ಯ ಜನರಿಗೆ ತಿಂಗಳಿಗೆ ₹25,000 ಹಣ ಉಳಿಸುತ್ತಿದೆ, ಇನ್ನೊಂದು ಪಕ್ಷವು ಗೂಂಡಾಗಿರಿಯಲ್ಲಿ ತೊಡಗಿದೆ’ ಎಂದು ಬಿಜೆಪಿಯನ್ನು ಗುರಿಯಾಗಿಸಿ ಹೇಳಿದರು.
ಇದೇ ವೇಳೆ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಅವರನ್ನು ಉಲ್ಲೇಖಿಸಿ, ‘ವೈಯಕ್ತಿಕ ಲಾಭಕ್ಕಾಗಿ ರಾಜಿ ಮಾಡಿಕೊಂಡು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಬೇಡಿ, ದೇಶದ ಭವಿಷ್ಯವನ್ನು ಪಣಕ್ಕಿಡಬೇಡಿ ಎಂದು ನಾನು ವಿನಂತಿಸುತ್ತೇನೆ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.