ADVERTISEMENT

ಮಾಲಿನ್ಯ ಹಿನ್ನೆಲೆ ದೆಹಲಿಯಲ್ಲಿ ನಿರ್ಬಂಧ: ಕಟ್ಟಡ ಕಾರ್ಮಿಕರಿಗೆ ₹10,000 ಪರಿಹಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 18 ಡಿಸೆಂಬರ್ 2025, 2:25 IST
Last Updated 18 ಡಿಸೆಂಬರ್ 2025, 2:25 IST
<div class="paragraphs"><p>ದೆಹಲಿಯಲ್ಲಿ ಟ್ರಕ್‌ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಎಲ್ಲಾ ರೀತಿಯ ಕಾಮಗಾರಿಗಳನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ</p></div>

ದೆಹಲಿಯಲ್ಲಿ ಟ್ರಕ್‌ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಎಲ್ಲಾ ರೀತಿಯ ಕಾಮಗಾರಿಗಳನ್ನು ನಿಲ್ಲಿಸುವಂತೆ ಆದೇಶಿಸಲಾಗಿದೆ

   

ಪಿಟಿಐ ಚಿತ್ರ

ನವದೆಹಲಿ: ದೇಶದ ರಾಜಧಾನಿಯಲ್ಲಿ ವಾಯುಮಾಲಿನ್ಯ ಪರಿಸ್ಥಿತಿ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದು, ದೆಹಲಿಯಲ್ಲಿ ಶ್ರೇಣೀಕೃತ ಪ್ರತಿಕ್ರಿಯೆ ಕ್ರಿಯಾ ಯೋಜನೆ (ಜಿಆರ್‌ಎಪಿ) ಅಡಿ ತೀವ್ರ ನಿರ್ಬಂಧಗಳನ್ನು ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಕೆಲಸದಿಂದ ವಂಚಿತರಾಗುವ ಕಟ್ಟಡ ಕಾರ್ಮಿಕರಿಗೆ ಹಣಕಾಸು ನೆರವು ನೀಡುವುದಾಗಿ ಕಾರ್ಮಿಕ ಸಚಿವ ಕಪಿಲ್ ಮಿಶ್ರಾ ಹೇಳಿದ್ದಾರೆ.

ADVERTISEMENT

ದೆಹಲಿಯಲ್ಲಿ 16 ದಿನಗಳಿಂದ ಜಿಆರ್‌ಎಪಿ ನಿರ್ಬಂಧಗಳು ಜಾರಿಯಲ್ಲಿದ್ದು, ನಗರದಾದ್ಯಂತ ಎಲ್ಲ ಕಟ್ಟಡ ನಿರ್ಮಾಣ ಕೆಲಸಗಳು ಸ್ಥಗಿತಗೊಂಡಿವೆ. ಈ ವಲಯದ ಮೇಲೆ ಅವಲಂಬಿತವಾಗಿರುವ ದಿನಗೂಲಿ ಕೆಲಸಗಾರರ ಮೇಲೆ ಇದು ಪರಿಣಾಮ ಬೀರಿದೆ. ಅಲ್ಲದೆ, ನಿರ್ಬಂಧ ಮತ್ತಷ್ಟು ದಿನ ಮುಂದುವರಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನೋಂದಣಿ ಮಾಡಿಕೊಂಡಿರುವ ಮತ್ತು ವೆರಿಫೈಡ್ ಕಟ್ಟಡ ಕಾರ್ಮಿಕರಿಗೆ ನೇರ ಸವಲತ್ತು ವರ್ಗಾವಣೆ(ಡಿಬಿಟಿ) ಮೂಲಕ ತಲಾ ₹10,000 ಹಣವನ್ನು ಅವರ ಖಾತೆಗಳಿಗೆ ವರ್ಗಾಯಿಸಲು ಕಾರ್ಮಿಕ ಸಚಿವಾಲಯ ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ನಿರ್ಬಂಧ ತೆರವಾದ ಬಳಿಕವೂ ನಿರ್ಬಂಧಗಳಿದ್ದ ದಿನಗಳನ್ನು ಲೆಕ್ಕಾಚಾರ ಮಾಡಿ ಪರಿಹಾರದ ಹಣ ನೀಡಲಾಗುವುದು ಎಂದಿದ್ದಾರೆ.

ಕಟ್ಟಡ ಕಾರ್ಮಿಕರ ನೋಂದಣಿ ಮತ್ತು ವೆರಿಫೈ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ. ದೆಹಲಿ ಸರ್ಕಾರದ ಪೋರ್ಟಲ್‌ನಲ್ಲಿ ನೋಂದಣಿ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸುವಂತೆ ಕಾರ್ಮಿಕರನ್ನು ಮಿಶ್ರಾ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿಕರ ನೆರವಿಗೆ ಸದಾ ಸಿದ್ಧರಿರುತ್ತಾರೆ. ಭವಿಷ್ಯದ ಮಾಲಿನ್ಯ ಸಂಬಂಧಿತ ನಿರ್ಬಂಧಗಳಿಂದ ಮಹಿಳಾ ಮತ್ತು ಪುರುಷ ಕಾರ್ಮಿಕರು ಸಂಕಷ್ಟಕ್ಕೆ ಈಡಾಗದಂತೆ ಸೂಕ್ತ ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ ಎಂದೂ ಅವರು ಹೇಳಿದ್ದಾರೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿದ್ದು, ಬುಧವಾರ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಕಾರ್ಮಿಕರಿಗೆ ಶೇ 50ರಷ್ಟು ವರ್ಕ್ ಫ್ರಂ ಹೋಮ್ ಕಡ್ಡಾಯಗೊಳಿಸಿ ಸರ್ಕಾರ ಆದೇಶಿಸಿತ್ತು. ಅಲ್ಲದೆ, ಆದೇಶ ಉಲ್ಲಂಘಿಸಿದರೆ ದಂಡ ವಿಧಿಸುವ ಎಚ್ಚರಿಕೆಯನ್ನೂ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.