ದೆಹಲಿ ವಾಯು ಮಾಲಿನ್ಯ
ನವದೆಹಲಿ: ರಾಷ್ಟ್ರ ರಾಜಧಾನಿಯ ಸರ್ಕಾರಿ ಕಚೇರಿಗಳಲ್ಲಿನ ಶೇ 50ರಷ್ಟು ಸಿಬ್ಬಂದಿ ಮನೆಯಿಂದ ಕೆಲಸ ಮಾಡಲಿದ್ದಾರೆ. ವಾಯು ಗುಣಮಟ್ಟವು ದಿನೇ ದಿನೇ ಹದಗೆಡುತ್ತಿರುವುದು ಇದಕ್ಕೆ ಕಾರಣ.
ದೆಹಲಿಯ ಪರಿಸರ ಸಚಿವ ಗೋಪಾಲ್ ರಾಯ್ ಅವರು ‘ಎಕ್ಸ್’ ಮೂಲಕ ಈ ವಿಷಯ ತಿಳಿಸಿದ್ದಾರೆ. ಖಾಸಗಿ ಸಂಸ್ಥೆಗಳೂ ಇದೇ ಕ್ರಮ ಅನುಸರಿಸಬೇಕು ಎಂದು ಅವರು ಆಗ್ರಹಪಡಿಸಿದ್ದಾರೆ.
ಖಾಸಗಿ ಸಂಸ್ಥೆಗಳು ಪಾಳಿ ಬದಲಾವಣೆಯ ಅವಧಿಯನ್ನು ಬೆಳಗಿನ 10.30ರಿಂದ 11ರವರೆಗೆ ಮರುನಿಗದಿ ಮಾಡಬೇಕು. ಇದೇ ಕ್ರಮವನ್ನು ದೆಹಲಿ ಸರ್ಕಾರ ತನ್ನ ಸಿಬ್ಬಂದಿಗೆ ಜಾರಿಗಳಿಸಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕ ಸೇವೆಗೆ ಧಕ್ಕೆ ಆಗದಂತೆ ಆರೋಗ್ಯ, ಒಳಚರಂಡಿ, ಸಾರ್ವಜನಿಕ ಸಾರಿಗೆ, ಅಗ್ನಿಶಾಮಕ ಸೇವೆ, ನೀರು ಸರಬರಾಜು, ಇತರೆ ತುರ್ತು ಸೇವೆಗಳ ಇಲಾಖೆಗಳವರು ಪೂರ್ಣಪ್ರಮಾಣದಲ್ಲಿ ಕೆಲಸ ಮಾಡುವರು.
ದೆಹಲಿಯಲ್ಲಿ ಬುಧವಾರ ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕವು 426 ಇತ್ತು. ಇಲ್ಲಿನ ನಿವಾಸಿಗಳಿಗೆ ಕಣ್ಣು ಉರಿ, ಉಸಿರಾಟದ ಸಮಸ್ಯೆಗಳು ಹಾಗೂ ಇತರೆ ಅನಾರೋಗ್ಯ ಸಮಸ್ಯೆಗಳು ಕಾಡುತ್ತಿವೆ.
ರಾಜಧಾನಿ ನೆರೆಯ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ, ಮಧ್ಯಪ್ರದೇಶ ಸರ್ಕಾರಗಳು ಮಾಲಿನ್ಯ ನಿಯಂತ್ರಿಸಲು ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಿಲ್ಲ ಎಂದು ಗೋಪಾಲ್ ರಾಯ್ ಅಸಮಾಧಾನ ವ್ಯಕ್ತಪಡಿಸಿದರು.
ಈ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದ್ದು, ಪ್ರತಿಕ್ರಿಯಾತ್ಮಕ ಕ್ರಮಗಳ ಕೊರತೆ ಇದೆ. ಮಾಲಿನ್ಯ ತಡೆಯಲು ಈ ಸರ್ಕಾರಗಳು ಕೂಡ ದೆಹಲಿ ಸರ್ಕಾರದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು ಎಂದು ಅವರು ಕೋರಿದ್ದಾರೆ.
ದೆಹಲಿ ಎನ್‌ಸಿಆರ್ ವ್ಯಾಪ್ತಿಯ ಜಿಲ್ಲೆಯಲ್ಲಿ ಆನ್‌ಲೈನ್ ತರಗತಿ: ರಾಜಸ್ಥಾನ ಸರ್ಕಾರ
ಜೈಪುರ: ದೆಹಲಿ–ಎನ್‌ಸಿಆರ್ ವ್ಯಾಪ್ತಿಗೆ ಒಳಪಡುವ ಖೈರ್ಥಲ್–ತಿಜಾರಾ ಜಿಲ್ಲೆಯಲ್ಲಿ ಎಲ್ಲ ಶಾಲೆಗಳು ಆನ್‌ಲೈನ್ ತರಗತಿ ನಡೆಸಬೇಕು ಎಂದು ರಾಜಸ್ಥಾನ ಸರ್ಕಾರ ಆದೇಶಿಸಿದೆ. ವಾಯುಮಾಲಿನ್ಯದ ಕಾರಣ ದೆಹಲಿ ಎನ್‌ಸಿಆರ್ ವ್ಯಾಪ್ತಿ ಪ್ರದೇಶಗಳ ಎಲ್ಲ ಸರ್ಕಾರಗಳು ಭೌತಿಕ ತರಗತಿಗಳ ಕುರಿತು ಸ್ಪಷ್ಟ ತೀರ್ಮಾನ ಕೈಗೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಹೀಗಾಗಿ ಜಿಲ್ಲಾಡಳಿತ ಈ ಅದೇಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.