ದೆಹಲಿಯಲ್ಲಿ ಸ್ಫೋಟ ನಡೆದ ಪ್ರದೇಶ
(ಪಿಟಿಐ)
ನವದೆಹಲಿ: ದೆಹಲಿಯ ರೋಹಿಣಿ ನಗರದ ಪ್ರಶಾಂತ್ ವಿಹಾರ್ ಪ್ರದೇಶದಲ್ಲಿ ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದ ಬೆನ್ನಲ್ಲೇ ಈ ಪ್ರದೇಶದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿರುವ ಖಾಸಗಿ ಶಾಲೆಗೆ ಇಂದು (ಶುಕ್ರವಾರ) ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶ ಬಂದಿದೆ ಎಂದು ದೆಹಲಿ ಅಗ್ನಿಶಾಮಕ ಸೇವೆ (ಡಿಎಫ್‌ಎಸ್) ತಿಳಿಸಿದೆ.
ಬಳಿಕ ಶಾಲೆಯ ಆವರಣದಲ್ಲಿ ಶೋಧ ನಡೆಸಲಾಯಿತು. ಇದೊಂದು ಹುಸಿ ಬೆದರಿಕೆ ಎಂದು ಖಚಿತಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಯ ರೋಹಿಣಿ ನಗರದ ಪ್ರಶಾಂತ್ ವಿಹಾರ್ ಪ್ರದೇಶದ ಪಿವಿಆರ್ ಮಲ್ಟಿಪ್ಲೆಕ್ಸ್ ಬಳಿ ಗುರುವಾರ ಸ್ಫೋಟ ಸಂಭವಿಸಿ, ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು.
ವೆಂಕಟೇಶ್ವರ ಗ್ಲೋಬಲ್ ಶಾಲೆಗೆ (ವಿಜಿಎಸ್) ಬೆಳಿಗ್ಗೆ ಸುಮಾರು 10.57ಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಸಂದೇಶ ಬಂದಿತ್ತು. ಈ ಶಾಲೆ ಗುರುವಾರ ಸ್ಫೋಟ ಸಂಭವಿಸಿದ ಪ್ರದೇಶದಿಂದ ಒಂದು ಕಿಲೋಮೀಟರ್ ದೂರದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಕ್ಷಣವೇ ದೆಹಲಿ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿತು. ದೆಹಲಿ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಶಾಲೆಯ ಆವರಣದಲ್ಲಿ ಪರಿಶೀಲನೆ ನಡೆಸಿತು. ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಮಕ್ಕಳ ಪೋಷಕರಿಗೆ ಸಂದೇಶವನ್ನು ರವಾನಿಸಲಾಯಿತು ಎಂದು ಶಾಲೆಯ ಪ್ರಾಂಶುಪಾಲರು ತಿಳಿಸಿದ್ದಾರೆ.
ಇದೇ ಪ್ರದೇಶದಲ್ಲಿ ಅ.20ರಂದು ಸಿಆರ್‌ಪಿಎಫ್ ಶಾಲೆ ಬಳಿ ಸಂಭವಿಸಿದ್ದ ಸ್ಫೋಟದಲ್ಲಿ ಗೋಡೆಗೆ ಹಾನಿಯಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.