ADVERTISEMENT

ದೆಹಲಿಯ ರೋಹಿಣಿ ಕೋರ್ಟ್‌ನಲ್ಲಿ ಗುಂಡಿನ ದಾಳಿ ಪ್ರಕರಣ: ಮುಖ್ಯ ಆರೋಪಿ ಬಂಧನ

ಪಿಟಿಐ
Published 12 ಜನವರಿ 2022, 14:41 IST
Last Updated 12 ಜನವರಿ 2022, 14:41 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಇಲ್ಲಿನ ರೋಹಿಣಿ ಕೋರ್ಟ್‌ನಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣದ ಮುಖ್ಯ ಆರೋಪಿ ರಾಕೇಶ್‌ ತಾಜ್‌ಪುರಿಯಾ (31) ಎಂಬಾತನನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಬುಧವಾರ ತಿಳಿಸಿದ್ದಾರೆ.

ಉತ್ತರ ದೆಹಲಿಯ ನರೇಲಾ ಕೈಗಾರಿಕಾ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿ ನಂತರ, ಆರೋಪಿಯನ್ನು ಬಂಧಿಸಲಾಯಿತು. ಆರೋಪಿ ಅಲಿಪುರ ನಿವಾಸಿಯಾಗಿದ್ದು, ಟಿಲ್ಲು ಗ್ಯಾಂಗ್‌ನ ಸದಸ್ಯ ಎಂದು ಪೊಲೀಸರು ತಿಳಿಸಿದ್ದಾರೆ.

ಟಿಲ್ಲು ಗ್ಯಾಂಗ್‌ ಸದಸ್ಯರ ಪೈಕಿ ರಾಕೇಶ್‌ ಹೆಚ್ಚು ಸಕ್ರಿಯವಾಗಿರುವ ಶಾರ್ಪ್‌ಶೂಟರ್‌. ಈತನ ಬಗ್ಗೆ ಸುಳಿವು ನೀಡಿದವರಿಗೆ ₹ 50,000 ಬಹುಮಾನ ಘೋಷಿಸಲಾಗಿತ್ತು.

ADVERTISEMENT

ಕಳೆದ ವರ್ಷ ಸೆಪ್ಟೆಂಬರ್‌ 24ರಂದು, ವಕೀಲರ ವೇಷ ತೊಟ್ಟು ಕೋರ್ಟ್‌ ಆವರಣ ಪ್ರವೇಶಿಸಿದ್ದ ಸುನೀಲ್‌ ಟಿಲ್ಲು ಗ್ಯಾಂಗ್‌ನ ಇಬ್ಬರು ದುಷ್ಕರ್ಮಿಗಳು, ಗುಂಡಿನ ದಾಳಿ ನಡೆಸಿದ್ದರು. ಈ ಘಟನೆಯಲ್ಲಿ ಜಿತೇಂದರ್ ಗೋಗಿ ಎಂಬುವವರು ಮೃತಪಟ್ಟಿದ್ದರು. ಟಿಲ್ಲು ಗ್ಯಾಂಗ್‌ನ ಎದುರಾಳಿಯಾಗಿದ್ದ ಜಿತೇಂದರ್ ಹತ್ಯೆಗೆ ಬಂಧಿತ ಆರೋಪಿ ರಾಕೇಶ್‌ ಸಂಚು ರೂಪಿಸಿದ್ದ. ಸುನೀಲ್‌ ಸೂಚನೆಯಂತೆ ಶೂಟರ್‌ಗಳು ಹಾಗೂ ಶಸ್ತ್ರಾಸ್ತ್ರಗಳ ವ್ಯವಸ್ಥೆ ಮಾಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಗೋಗಿ ಗ್ಯಾಂಗ್‌ ಸದಸ್ಯರಾಗಿದ್ದ ಸೋನು ಕಂಡಾ, ಕುಲ್ಬೀರ್‌ ಮಾಥೂರ್ ಹಾಗೂ ನಿತೇಶ್‌ ಎಂಬುವವರನ್ನು ಕಳೆದ ವರ್ಷ ರಾಕೇಶ್‌ ಹತ್ಯೆ ಮಾಡಿದ್ದ ಎಂದೂ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.