ನವದೆಹಲಿ: ಓಮೈಕ್ರಾನ್ ಒಳಗೊಂಡಂತೆ ಕೋವಿಡ್ ಪ್ರಕರಣಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಫೆಬ್ರುವರಿ 7ರಿಂದ (ಸೋಮವಾರ) ದೆಹಲಿಯಲ್ಲಿ ಶಾಲೆ, ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಪುನರಾರಂಭಗೊಳ್ಳಲಿದೆ. ಪೂರ್ಣ ಪ್ರಮಾಣದಲ್ಲಿ ಕಚೇರಿ ಕಾರ್ಯ ನಿರ್ವಹಿಸಲು ಅವಕಾಶ ಕಲ್ಪಿಸಲಾಗಿದೆ.
ಶುಕ್ರವಾರ ದೆಹಲಿ ಸರ್ಕಾರವು ಈ ಕುರಿತು ಮಹತ್ವದ ಘೋಷಣೆಯನ್ನು ಮಾಡಿದೆ. ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ), ಮುಂದಿನ ವಾರದಿಂದ ಜಿಮ್‌ಗಳು, ಈಜುಕೊಳಗಳು ಮತ್ತು ಸ್ಪಾಗಳನ್ನು ತೆರೆಯಲು ಅನುಮತಿ ನೀಡಿದೆ.
ರಾತ್ರಿ ಕರ್ಫ್ಯೂ ಅವಧಿಯನ್ನು ಒಂದು ಗಂಟೆ ಕಡಿಮೆ ಮಾಡಲಾಗಿದೆ. ರಾತ್ರಿ 10ರ ಬದಲು 11ರಿಂದ ಬೆಳಿಗ್ಗೆ 5ರವರೆಗೆ ರಾತ್ರಿ ಕರ್ಫ್ಯೂ ಇರಲಿದೆ. ಅಂದರೆ ರಾತ್ರಿ 11ರ ವರೆಗೆ ರೆಸ್ಟೋರೆಂಟ್‌ಗಳುಕಾರ್ಯಾಚರಿಸಲಿವೆ.
ಫೆಬ್ರುವರಿ 7ರಿಂದ 9ರಿಂದ 12ನೇ ವರೆಗಿನ ತರಗತಿಗಳನ್ನು ತೆರೆಯಲಾಗುವುದು. ಲಸಿಕೆ ಪಡೆಯದ ಶಿಕ್ಷಕರಿಗೆ ಪಾಠ ಮಾಡಲು ಅವಕಾಶವಿಲ್ಲ. ಫೆಬ್ರುವರಿ 14ರಿಂದ ನರ್ಸರಿಯಿಂದ 8ರವರೆಗಿನ ತರಗತಿಗಳು ತೆರೆಯಲಿವೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
ಕಚೇರಿಗಳಲ್ಲಿ ಶೇ 100ರಷ್ಟು ಹಾಜರಾತಿಯೊಂದಿಗೆ ಕೆಲಸ ಪ್ರಾರಂಭಿಸಬಹುದಾಗಿದೆ. ಕಾರಿನಲ್ಲಿ ಒಬ್ಬರೇ ಸಂಚರಿಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕಿಲ್ಲ ಎಂದು ತಿಳಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ 2,668 ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದವು. ಈ ಮೂಲಕ ಕೋವಿಡ್ ದೃಢ ಪ್ರಮಾಣದಲ್ಲಿ ಇಳಿಮುಖವಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.