ADVERTISEMENT

ಗಣರಾಜ್ಯೋತ್ಸವ: ರಾಜಪಥದಲ್ಲಿ ಬಿಗಿ ಭದ್ರತೆ

ದೂರದರ್ಶನದಲ್ಲಿ ಬೆಳಿಗ್ಗೆ 9.15ರಿಂದ ನೇರಪ್ರಸಾರ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 19:45 IST
Last Updated 25 ಜನವರಿ 2022, 19:45 IST
73ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ವಿಧಾನಸೌಧವು ವಿದ್ಯುದ್ದೀಪಗಳಿಂದ ಝಗಮಗಿಸುತ್ತಿತ್ತು- ಪ್ರಜಾವಾಣಿ ಚಿತ್ರ/ ಅನೂಪ್ ರಾಘ್ ಟಿ.
73ನೇ ಗಣರಾಜ್ಯೋತ್ಸವದ ಮುನ್ನಾ ದಿನವಾದ ಮಂಗಳವಾರ ವಿಧಾನಸೌಧವು ವಿದ್ಯುದ್ದೀಪಗಳಿಂದ ಝಗಮಗಿಸುತ್ತಿತ್ತು- ಪ್ರಜಾವಾಣಿ ಚಿತ್ರ/ ಅನೂಪ್ ರಾಘ್ ಟಿ.   

ನವದೆಹಲಿ: ಬುಧವಾರ ಬೆಳಿಗ್ಗೆ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಕಾರ್ಯಕ್ರಮ ಹಾಗೂ ಪಥ ಸಂಚಲನಕ್ಕೆ ಸಕಲ ಸಿದ್ಧತೆಗಳು ನಡೆದಿದ್ದು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ.

ಪಥ ಸಂಚಲನ, ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳ ಮೆರವಣಿಗೆ ಹಾಗೂ ನೃತ್ಯ ವೈಭವವನ್ನು ಒಳಗೊಂಡ ಮೂರು ಗಂಟೆಗೂ ಅಧಿಕ ಅವಧಿಯ ಕಾರ್ಯಕ್ರಮವನ್ನು ಸೆರೆ ಹಿಡಿದುದೂರದರ್ಶನದಲ್ಲಿ ನೇರ ಪ್ರಸಾರ ಮಾಡಲು ರಾಷ್ಟ್ರಪತಿ ಭವನದಿಂದ ಇಂಡಿಯಾ ಗೇಟ್ ಹಿಂಭಾಗದಲ್ಲಿರುವ ರಾಷ್ಟ್ರೀಯ ಯುದ್ಧ ಸ್ಮಾರಕದವರೆಗೆ ಅಂದಾಜು 2 ಕಿಲೋಮೀಟರ್ ವ್ಯಾಪ್ತಿಯಲ್ಲಿ ಅತ್ಯಾಧುನಿಕ ಮಾದರಿಯ ಒಟ್ಟು 59 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಚಿತ್ರೀಕರಣ ಕಾರ್ಯಕ್ಕಾಗಿ 160ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಈ 59 ಕ್ಯಾಮೆರಾಗಳ ಪೈಕಿ 33 ಕ್ಯಾಮೆರಾಗಳನ್ನು ರಾಜಪಥದಲ್ಲಿ ಅಳವಡಿಸಲಾಗಿದ್ದರೆ, ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ 16 ಹಾಗೂ ಇಂಡಿಯಾ ಗೇಟ್, ರಾಷ್ಟ್ರೀಯ ಕ್ರೀಡಾಂಗಣ ಹಾಗೂ ರಾಷ್ಟ್ರಪತಿ ಭವನದ ಬಳಿ 10 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ADVERTISEMENT

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ ಅಂಗವಾಗಿ ಭಾರತೀಯ ವಾಯುಪಡೆಯು ರಾಜ ಪಥದಲ್ಲಿ 75 ವಿಶಿಷ್ಟ ವಿಮಾನಗಳ ಹಾರಾಟ ವ್ಯವಸ್ಥೆಯನ್ನೂ ಮಾಡುತ್ತಿದ್ದು, ಈ ವೈಮಾನಿಕ ಪ್ರದರ್ಶನದ ನೇರ ಪ್ರಸಾರಕ್ಕಾಗಿ ವಾಯುಪಡೆಯ ಸಹಯೋ ಗದಲ್ಲೇ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾರ್ಯಕ್ರಮದ ವಿಹಂಗಮ ನೋಟವನ್ನು (360 ಡಿಗ್ರಿ) ಸೆರೆ ಹಿಡಿಯಲೆಂದೇ ಎರಡು ಅತ್ಯಾಧುನಿಕ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. ಈ ಪೈಕಿ ಒಂದನ್ನು ರಾಜಪಥದಲ್ಲಿ, ಇನ್ನೊಂದನ್ನು ಇಂಡಿಯಾ ಗೇಟ್‌ನ ಮೇಲ್ಭಾಗದಲ್ಲಿ ಅಳವಡಿಸಲಾಗಿದೆ.

ರಾಷ್ಟ್ರೀಯ ಯುದ್ಧ ಸ್ಮಾರಕ ಮತ್ತು ಇಂಡಿಯಾ ಗೇಟ್ ಬಳಿಯ ದೃಶ್ಯಾವಳಿಗಳನ್ನು ಸೆರೆ ಹಿಡಿಯಲು 120 ಅಡಿ ಎತ್ತರದ ಹೈಡ್ರಾಲಿಕ್ ಕ್ರೇನ್‌ನಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ, ವಿಶೇಷ ರಿಮೋಟ್ ನಿಯಂತ್ರಿತ ಕ್ಯಾಮೆರಾಗಳನ್ನು ರಾಷ್ಟ್ರಪತಿ ಭವನದ ಆವರಣ ಹಾಗೂ ರಾಜಪಥದಲ್ಲಿ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.