ADVERTISEMENT

ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲ್ಲ: ಕೇಜ್ರಿವಾಲ್‌

ಪಿಟಿಐ
Published 26 ಮೇ 2023, 19:39 IST
Last Updated 26 ಮೇ 2023, 19:39 IST
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್   

ನವದೆಹಲಿ: ದೆಹಲಿ ಸೇವಾ ವಿಷಯಗಳ ಮೇಲಿನ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ ಹಿನ್ನೆಲೆಯಲ್ಲಿ ನೀತಿ ಆಯೋಗದ ಸಭೆಯಲ್ಲಿ ಭಾ‌ಗವಹಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಮೇ 11 ರಂದು ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪಿನ ಆಧಾರದ ಮೇಲೆ ಸೇವಾ ವಿಷಯದ ಮೇಲಿನ ನಿಯಂತ್ರಣವನ್ನು ದೆಹಲಿ ಸರ್ಕಾರಕ್ಕೆ ನೀಡಲಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಅದನ್ನು ಹಿಂಪಡೆದಿತ್ತು. 

‘ಈ ಸಭೆಯ ಉದ್ದೇಶವೆಂದರೆ, ಭಾರತದ ದೃಷ್ಟಿಕೋನವನ್ನು ಸಿದ್ಧಪಡಿಸುವುದು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದಾಗಿದೆ. ಆದರೆ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಬಹಿರಂಗವಾಗಿ ಉಲ್ಲಂಘಿಸಲಾಗುತ್ತಿದೆ. ಒಕ್ಕೂಟ ವ್ಯವಸ್ಥೆಯನ್ನು ತಮಾಷೆಯಾಗಿ ಕಾಣಲಾಗುತ್ತಿದೆ. ಈ ಕಾರಣದಿಂದ ಸಭೆಗೆ ಭಾಗವಹಿಸಲು ಯಾವುದೇ ಪ್ರಮುಖ ಅಂಶಗಳು ಕಾಣುತ್ತಿಲ್ಲ‘ ಎಂದು ಕೇಜ್ರಿವಾಲ್‌ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ADVERTISEMENT

ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಕೂಡ ಈ ಸಭೆಯನ್ನು ಬಹಿಷ್ಕರಿಸಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೂ ಸಭೆಗೆ ಹಾಜರಾಗುತ್ತಿಲ್ಲ. ‘ಮಮತಾ ಅವರು ಬೇರೆ ಕಾರ್ಯಕ್ರಮದಲ್ಲಿ ನಿರತರಾಗಿರುವ ಕಾರಣ, ತಾವು ಮತ್ತು ಮುಖ್ಯ ಕಾರ್ಯದರ್ಶಿ ಭಾಗವಹಿಸುವುದಾಗಿ ಹೇಳಿದರೂ ಕೇಂದ್ರ ಅದಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಈ ಬಾರಿಯ ಸಭೆಗೆ ಪಶ್ಚಿಮ ಬಂಗಾಳದಿಂದ ಯಾರೂ ಪಾಲ್ಗೊಳ್ಳುತ್ತಿಲ್ಲ‘ ಎಂದು ಹಣಕಾಸು ಸಚಿವ ಚಂದ್ರಿಮಾ ಭಟ್ಟಾಚಾರ್ಯ ಅವರು ಪಿಟಿಐಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.