ADVERTISEMENT

ಕ್ರೀಡಾ ವಿವಿಯಿಂದ ಕಬ್ಬಡಿ, ಕುಸ್ತಿ, ಕ್ರಿಕೆಟ್‌ಗೆಲ್ಲಾ ಬಿಎ ಪದವಿ- ಕೇಜ್ರಿವಾಲ್‌

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 15:43 IST
Last Updated 24 ಜೂನ್ 2022, 15:43 IST
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌   

ನವದೆಹಲಿ: ಮುಂಬರುವ ದೆಹಲಿ ವಿಶ್ವವಿದ್ಯಾಲಯದಲ್ಲಿ ಕ್ರೀಡೆಗೆ ಅನುಗುಣವಾಗಿ ಬಿಎ ಪದವಿಯನ್ನು ನೀಡಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಘೋಷಣೆ ಮಾಡಿದ್ದಾರೆ.

ಕ್ರೀಡಾಪಟುಗಳಿಗೆ ಹಣಕಾಸಿನ ನೆರವು ಒದಗಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜ್ರಿವಾಲ್‌, ದೆಹಲಿ ಕ್ರೀಡಾ ವಿಶ್ವವಿದ್ಯಾಲಯದಲ್ಲಿ ಕ್ರೀಡಾಪಟುಗಳಿಗೆ ಆಯಾ ಕ್ರೀಡೆಗೆ ಅನುಗುಣವಾಗಿ, ಕಬ್ಬಡಿಯಲ್ಲಿ ಬಿಎ ಪದವಿ, ಕುಸ್ತಿಯಲ್ಲಿ ಬಿಎ ಪದವಿ ಮತ್ತು ಕ್ರಿಕೆಟ್‌ನಲ್ಲಿ ಬಿಎ ಪದವಿ- ಹೀಗೆ ಮತ್ತಿತರ ಕ್ರೀಡೆಗಳಿಗೆ ಪದವಿಯನ್ನು ನೀಡಲಾಗುತ್ತದೆ. ಇದರಿಂದ ಭವಿಷ್ಯದಲ್ಲಿ ಕ್ರೀಡಾಪಟುಗಳಿಗೆ ನೌಕರಿ ಹೊಂದಲು ಸಹಾಯವಾಗಲಿದೆ ಎಂದಿದ್ದಾರೆ.

ಕ್ರೀಡಾಪಟುಗಳು ಎದುರಿಸುತ್ತಿರುವ ಪ್ರಮುಖ ಮೂರು ಕುಂದುಕೊರತೆಗಳನ್ನು ನಿವಾರಿಸುವುದಾಗಿ ಅಭಯ ನೀಡಿದ್ದಾರೆ. ಸೌಲಭ್ಯಗಳ ಕೊರತೆ, ಬೆಂಬಲದ ಕೊರತೆ ಮತ್ತು ಆಯ್ಕೆ ಪ್ರಕ್ರಿಯೆಗಳಲ್ಲಿ ರಾಜಕೀಯ- ಈ ಸಮಸ್ಯೆಗಳನ್ನು ನಿವಾರಿಸುವುದಾಗಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

ADVERTISEMENT

'ಹೆಚ್ಚಿನ ಕ್ರೀಡಾಪಟುಗಳಿಗೆ ಕ್ರೀಡೆ ಅಥವಾ ಓದಿನ ನಡುವೆ ಒಂದನ್ನು ಆಯ್ದುಕೊಳ್ಳಬೇಕಾದ ಗೊಂದಲಗಳು ಮೂಡುತ್ತವೆ. ಕ್ರೀಡೆಯ ಮೇಲೆ ಹೆಚ್ಚು ಆಸಕ್ತಿ ವಹಿಸಿದರೆ ಓದನ್ನು ಅರ್ಧದಲ್ಲೇ ಕೈಬಿಡಬೇಕಾಗುತ್ತದೆ. ಇದರಿಂದ ನೌಕರಿ ಹೊಂದಲು ತುಂಬ ಕಷ್ಟ ಪಡಬೇಕಾಗುತ್ತದೆ. ನೌಕರಿಗೆ ಶೈಕ್ಷಣಿಕ ಅರ್ಹತೆಯನ್ನು ಕೇಳುತ್ತಾರೆ. ಈಗ ಅದರ ಬಗ್ಗೆ ಚಿಂತಿಸಬೇಕು ಎಂದಿಲ್ಲ. ಕ್ರೀಡೆಯಲ್ಲೇ ಆ ಪದವಿಯನ್ನು ಗಿಟ್ಟಿಸಿಕೊಳ್ಳಬಹುದು' ಎಂದು ಕೇಜ್ರಿವಾಲ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.