ಕೈಲಾಶ್ ಗೆಹಲೋತ್
–ಪಿಟಿಐ ಚಿತ್ರ
ನವದೆಹಲಿ: ಎಎಪಿ ಹಿರಿಯ ನಾಯಕ ಹಾಗೂ ದೆಹಲಿ ಸರ್ಕಾರದ ಸಾರಿಗೆ ಸಚಿವ ಕೈಲಾಶ್ ಗಹಲೋತ್ ಅವರು ಭಾನುವಾರ ಪಕ್ಷ ತೊರೆದಿದ್ದಾರೆ. ಇದು ಎಎಪಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ.
ಪಕ್ಷವು ವಿವಾದಗಳಿಗೆ ತುತ್ತಾಗಿರುವುದು ಹಾಗೂ ಭರವಸೆಗಳನ್ನು ಈಡೇರಿಸದೆ ಇರುವುದು ರಾಜೀನಾಮೆಗೆ ಕಾರಣ ಎಂದು ಅವರು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನಜಫ್‌ಗಢ ಶಾಸಕ ಆಗಿರುವ ಗಹಲೋತ್ ಅವರು ಮಂತ್ರಿ ಪರಿಷತ್ತಿಗೆ ಕೂಡ ತಕ್ಷಣದಿಂದಲೇ ಅನ್ವಯವಾಗುವಂತೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರವನ್ನು ಅವರು ಮುಖ್ಯಮಂತ್ರಿ ಆತಿಶಿ ಅವರಿಗೆ ಕಳುಹಿಸಿದ್ದಾರೆ. ರಾಜೀನಾಮೆ ಸ್ವೀಕೃತವಾಗಿದೆ ಎಂದು ಮೂಲಗಳು ಹೇಳಿವೆ.
ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರಿಗೆ ಪ್ರತ್ಯೇಕವಾದ ಪತ್ರವನ್ನು ಬರೆದಿರುವ ಅವರು, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಪತ್ರವನ್ನು ಅವರು ‘ಎಕ್ಸ್’ ಮೂಲಕ ಹಂಚಿಕೊಂಡಿದ್ದಾರೆ.
ಪಕ್ಷವು ‘ಶೀಷಮಹಲ್‌ನಂತಹ ಮುಜುಗರಕ್ಕೆ ತುತ್ತಾಗುವ ಹಾಗೂ ಪೇಚಿನ ಪರಿಸ್ಥಿತಿ’ಯ ವಿವಾದಕ್ಕೆ ಸಿಲುಕಿದೆ ಎಂದು ಗಹಲೋತ್ ಅವರು ಹೇಳಿದ್ದಾರೆ.
ಕೇಜ್ರಿವಾಲ್ ಅವರು ತಮ್ಮ ಹಿಂದಿನ ಸರ್ಕಾರಿ ನಿವಾಸದಲ್ಲಿ ಐಷಾರಾಮಿ ವಸ್ತುಗಳಿಗಾಗಿ ಕೋಟಿಗಟ್ಟಲೆ ಹಣ ವ್ಯಯಿಸಿದ್ದರು ಎಂದು ಬಿಜೆಪಿ ಆರೋಪಿಸಿತ್ತು. ಕೇಜ್ರಿವಾಲ್ ಅವರು ಇದ್ದ ಸರ್ಕಾರಿ ನಿವಾಸವನ್ನು ಬಿಜೆಪಿಯು ‘ಶೀಷಮಹಲ್’ ಎಂದು ಕರೆದಿತ್ತು.
ಜನರ ಹಕ್ಕುಗಳಿಗಾಗಿ ಹೋರಾಟ ನಡೆಸುವ ಬದಲು ಎಎಪಿಯು ತನ್ನದೇ ಆದ ಕಾರ್ಯಸೂಚಿಗಾಗಿ ಹೋರಾಟ ನಡೆಸುತ್ತಿದೆ. ಈ ಕಾರಣದಿಂದಾಗಿ ದೆಹಲಿಯಲ್ಲಿ ಮೂಲ ಸೇವೆಗಳನ್ನು ಒದಗಿಸುವಲ್ಲಿ ಅಡಚಣೆ ಉಂಟಾಗಿದೆ ಎಂದು ಗಹಲೋತ್ ದೂರಿದ್ದಾರೆ.
‘ಎಎಪಿಯು ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ... ರಾಜಕೀಯ ಮಹತ್ವಾಕಾಂಕ್ಷೆಗಳು ನಾವು ಜನರಿಗೆ ನೀಡಿದ್ದ ಭರವಸೆಗಳಿಗಿಂತ ದೊಡ್ಡದಾಗಿವೆ. ಇದರಿಂದಾಗಿ ಹಲವು ಭರವಸೆಗಳು ಈಡೇರಿಲ್ಲ’ ಎಂದು ಗಹಲೋತ್ ಹೇಳಿದ್ದಾರೆ.
ಗಹಲೋತ್ ಅವರು ಇ.ಡಿ. ಮತ್ತು ಸಿಬಿಐ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ, ಅವರಿಗೆ ಬಿಜೆಪಿ ಸೇರುವುದನ್ನು ಹೊರತುಪಡಿಸಿ ಬೇರೆ ಆಯ್ಕೆಗಳು ಇಲ್ಲ ಎಂದು ಎಎಪಿ ಮುಖಂಡರು ಪ್ರತಿಕ್ರಿಯೆ ನೀಡಿದ್ದಾರೆ. ‘ಇದು ಬಿಜೆಪಿಯ ಕೊಳಕು ರಾಜಕೀಯ ಪಿತೂರಿ. ಇ.ಡಿ ಮತ್ತು ಸಿಬಿಐ ದುರ್ಬಳಕೆ ಮಾಡಿಕೊಂಡು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲು ಅದು ಬಯಸಿದೆ’ ಎಂದು ಎಎಪಿ ಮುಖಂಡರು ಆರೋಪಿಸಿದ್ದಾರೆ.
ಗಹಲೋತ್ ರಾಜೀನಾಮೆಯನ್ನು ಸ್ವಾಗತಿಸಿರುವ ಬಿಜೆಪಿಯ ದೆಹಲಿ ಘಟಕದ ಮುಖ್ಯಸ್ಥ ವೀರೇಂದ್ರ ಸಚದೇವ ಅವರು, ಗಹಲೋತ್ ಅವರು ಬಹಳ ಧೈರ್ಯದ ಹೆಜ್ಜೆ ಇರಿಸಿದ್ದಾರೆ ಎಂದು ಹೇಳಿದ್ದಾರೆ.
‘ಕೇಜ್ರಿವಾಲ್ ಅವರ ವಿರುದ್ಧ ಬಿಜೆಪಿ ಯಾವ ವಿಷಯಗಳನ್ನು ಪ್ರಸ್ತಾಪಿಸಿ ಹೋರಾಟ ನಡೆಸಿತ್ತೋ, ಅದೇ ವಿಷಯಗಳನ್ನು ಉಲ್ಲೇಖಿಸಿ ಗಹಲೋತ್ ರಾಜೀನಾಮೆ ನೀಡಿದ್ದಾರೆ. ಕೇಜ್ರಿವಾಲ್ ಅವರು ಪ್ರಾಮಾಣಿಕ ಎಂದು ಎಎಪಿ ನಾಯಕರೂ ಪರಿಗಣಿಸುತ್ತಿಲ್ಲ ಎಂಬುದನ್ನು ಈ ರಾಜೀನಾಮೆಯ ತೋರಿಸುತ್ತಿದೆ’ ಎಂದು ಸಚದೇವ ಹೇಳಿದ್ದಾರೆ.
ಅರವಿಂದ ಕೇಜ್ರಿವಾಲ್ ಅವರ ಹಿತಾಸಕ್ತಿಗಳಿಗೆ ಕೆಲಸ ಮಾಡುವ ಉದ್ದೇಶದಿಂದ ಎಎಪಿ ಈಗ ತನ್ನ ಮೊದಲಿನ ಮೌಲ್ಯಗಳಿಂದ ದೂರ ಸರಿದಿದೆ ಎಂದು ಬಿಜೆಪಿ ವಕ್ತಾರ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ.
ಎಎಪಿ ಈಗ ಅರವಿಂದ ಕೇಜ್ರಿವಾಲ್ ಅವರಿಗಾಗಿ ಮಾತ್ರ ಇರುವ ಪಕ್ಷವಾಗಿದೆ. ಅದು ಈಗ ‘ಅರವಿಂದ ಆದ್ಮಿ ಪಕ್ಷ’ವಾಗಿದೆ.ಶೆಹಜಾದ್ ಪೂನಾವಾಲಾ ಬಿಜೆಪಿ ವಕ್ತಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.