ADVERTISEMENT

ಧಗಧಗ ಉರಿದ ದೆಹಲಿ ಗುರುವಾರ ಶಾಂತ: ಮೃತರ ಸಂಖ್ಯೆ 34ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2020, 8:31 IST
Last Updated 27 ಫೆಬ್ರುವರಿ 2020, 8:31 IST
   

ನವದೆಹಲಿ: ಗಲಭೆ ಪೀಡಿತದೆಹಲಿಯಲ್ಲಿ ಗುರುವಾರ ಮಧ್ಯಾಹ್ನದ ವೇಳೆಗೆ ಮೃತಪಟ್ಟವರ ಸಂಖ್ಯೆ 34ಕ್ಕೆ ಏರಿದೆ. ಬೆಳಗಿನ ಜಾವದಿಂದ ಯಾವುದೇ ಅಹಿತಕರ ಘಟನೆ ನಡೆದ ಬಗ್ಗೆ ವರದಿಯಾಗಿಲ್ಲ. ಆದರೂ ಗಲಭೆಯಲ್ಲಿ ಸಿಲುಕಿ ಗಾಯಗೊಂಡ ಸುಮಾರು 200ಕ್ಕೂ ಹೆಚ್ಚು ಮಂದಿಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇವರಲ್ಲಿ ತೀವ್ರ ಗಾಯಗೊಂಡವರು ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ. ಬುಧವಾರ ರಾತ್ರಿಯಿಂದಲೇ ಪೊಲೀಸರು ಹಾಗೂ ಅರೆಸೇನಾ ತುಕಡಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಗಸ್ತು ತಿರುಗಿದ್ದು, ಅಲ್ಲಲ್ಲಿ ಭದ್ರತಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಇಲ್ಲಿನ ಸೀಲಾಂಪುರ, ಚಾಂದ್ ಬಾಗ್, ಭಜನ್‌‌ಪುರ, ಖಜೂರಿಖಾಸ್ ಪ್ರದೇಶಗಳಲ್ಲಿ ತೀವ್ರ ನಿಗಾ ವಹಿಸಲಾಗಿದೆ.

ಗಲಭೆ ಪೀಡಿತ ಪ್ರದೇಶಗಳರಸ್ತೆಗಳನ್ನು ಪಾಲಿಕೆ ಸಿಬ್ಬಂದಿ ಗುರುವಾರ ಬೆಳಗಿನ ಜಾವ ಸ್ವಚ್ಛಗೊಳಿಸಿದ್ದಾರೆ. ಬೆಳಗಿನ ಜಾವ ಯಾವುದೇ ಅಂಗಡಿ ಮುಂಗಟ್ಟು ತೆರೆದಿರಲಿಲ್ಲ. ಜನರು ದಿನ ಬಳಕೆ ವಸ್ತುಗಳಿಗೆ ಪರದಾಡುವಂತಾಗಿದೆ.

'ನಾವೆಲ್ಲಾ ನಿಮ್ಮ ರಕ್ಷಣೆಗೆ ಇದ್ದೇವೆ. ದಿನನಿತ್ಯದ ವಸ್ತುಗಳ ಅಂಗಡಿ ತೆಗೆಯಬಹುದು. ಆದರೆ, ಯುವಕರು ಗುಂಪು ಸೇರಬೇಡಿ' ಎಂದು ದೆಹಲಿಯ ಜಂಟಿ ಪೊಲೀಸ್ ಆಯುಕ್ತ ಒ ಪಿ ಮಿಶ್ರಾ ಗುರುವಾರ ಸಿಬ್ಬಂದಿಯೊಂದಿಗೆ ಭದ್ರತೆಪಡೆಯೊಂದಿಗೆ ಗಸ್ತು ನಡೆಸಿ ಮೈಕಿನ ಮೂಲಕ ಸಾರಿದ್ದಾರೆ.ಪೊಲೀಸರು ಮನವಿ ಮಾಡುತ್ತಿದ್ದರೂ ಯಾರೊಬ್ಬರೂ ಹೊರಗೆ ಬರುತ್ತಿಲ್ಲ. ಬೆಳಗಿನ ಜಾವ ಅಲ್ಲಲ್ಲಿ ಜನರು ಮನೆಯ ಬಾಗಿಲುಗಳನ್ನು ತೆರೆದರೂ ಹೊರಗೆ ಕಾಲಿಡುತ್ತಿಲ್ಲ. ಅಂಗಡಿ ಮುಂಗಟ್ಟು ಮುಚ್ಚಿದ ಸ್ಥಿತಿಯಲ್ಲಿವೆ.

ಗುರುವಾರ ಸಾಮಾನ್ಯ ಸ್ಥಿತಿಗೆ ಮರಳಿದೆ: ಡಿಸಿಪಿ ಎಸ್ಎನ್ ಶ್ರೀವಾಸ್ತವಪರಿಸ್ಥಿತಿ ಶಾಂತವಾಗಿದೆ. ರಾತ್ರಿಯಿಂದ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮೊದಲು ಪ್ರಕರಣ ದಾಖಲಿಸುವ ಕೆಲಸ ನಡೆಯುತ್ತಿದೆ. ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಗಲಭೆಯಲ್ಲಿ ಭಾಗಿಯಾದವರನ್ನು ಬಂಧಿಸಲಾಗುವುದು ಎಂದು ದೆಹಲಿಯ ಎಸ್ ಡಿಸಿಪಿ ಎಸ್.ಎನ್.ಶ್ರೀವಾಸ್ತವ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.