ADVERTISEMENT

ದೆಹಲಿ ಹಿಂಸಾಚಾರ: ಶಾಂತಿ ಕಾಪಾಡಲು ಪ್ರಧಾನಿ ನರೇಂದ್ರ ಮೋದಿ ಮನವಿ

ಏಜೆನ್ಸೀಸ್
Published 26 ಫೆಬ್ರುವರಿ 2020, 10:02 IST
Last Updated 26 ಫೆಬ್ರುವರಿ 2020, 10:02 IST
   

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಹಿಂಸಾಚಾರ ಮೂರನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ ಶಾಂತಿ ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

‘ಶಾಂತಿ ಮತ್ತು ಸಾಮರಸ್ಯವು ನಮ್ಮ ನೀತಿಗಳಿಗೆ ಕೇಂದ್ರವಾಗಿದೆ. ಎಲ್ಲ ಸಮಯದಲ್ಲಿಯೂ ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡುವಂತೆ ದೆಹಲಿಯ ಸಹೋದರ ಸಹೋದರಿಯರಲ್ಲಿ ಮನವಿ ಮಾಡುತ್ತಿದ್ದೇನೆ. ಶಾಂತಿಯಿಂದ ಇರುವುದು ಬಹುಮುಖ್ಯ. ಬೇಗನೇ ಪರಿಸ್ಥಿತಿಯನ್ನು ಸಹಜಗೊಳಿಸಲಾಗುತ್ತದೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

‘ದೆಹಲಿಯ ಹಲವು ಪ್ರದೇಶಗಳಲ್ಲಿನ ಸ್ಥಿತಿಗತಿಯ ಬಗ್ಗೆ ಪರಾಮರ್ಶೆ ನಡೆಸಿದೆ. ಶಾಂತಿ ಮತ್ತು ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಪೊಲೀಸರು ಮತ್ತು ಇತರ ಏಜೆನ್ಸಿಗಳು ತಳಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ’ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿ ಉಲ್ಲೇಖಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧದ ಪ್ರತಿಭಟನೆ ವೇಳೆ ಸೋಮವಾರ ದೆಹಲಿಯಲ್ಲಿ ಆರಂಭವಾದ ಹಿಂಸಾಚಾರ ಬಳಿಕ ತೀವ್ರಗೊಂಡಿತ್ತು. ನಂತರ ಹಲವೆಡೆ ನಡೆದ ಗಲಭೆಗಳಲ್ಲಿ ಈವರೆಗೆ 20 ಜನ ಮೃತಪಟ್ಟಿದ್ದಾರೆ. ಇದೀಗ ಗಲಭೆಯ ಆಘಾತಕಾರಿ ಚಿತ್ರಣಗಳೂ ಒಂದೊಂದಾಗಿ ಬೆಳಕಿಗೆ ಬರಲಾರಂಭವಾಗಿದ್ದು, ಚಾಂದ್ ಬಾಗ್ ಪ್ರದೇಶದ ಚರಂಡಿಯೊಂದರಲ್ಲಿ ಗುಪ್ತಚರ ಇಲಾಖೆಯ ಸಿಬ್ಬಂದಿಯೊಬ್ಬರ ಶವ ಇಂದು ಪತ್ತೆಯಾಗಿದೆ.

ಹಿಂಸಾಚಾರ ನಿಯಂತ್ರಿಸುವ ಸಲುವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಹಲವು ಸಭೆಗಳನ್ನು ನಡೆಸಿದ್ದರು. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ರಾಜಕೀಯ ಪಕ್ಷಗಳ ನಾಯಕರು ಮತ್ತು ಉನ್ನತ ಅಧಿಕಾರಿಗಳ ಜತೆಗೂ ಸಭೆ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.