ADVERTISEMENT

ದೆಹಲಿ ವಕ್ಫ್‌ ಮಂಡಳಿ ಹಗರಣ: AAP ಶಾಸಕನ ವಿರುದ್ಧ ಆದೇಶ ಕಾಯ್ದಿರಿಸಿದ ನ್ಯಾಯಾಲಯ

ಪಿಟಿಐ
Published 6 ಏಪ್ರಿಲ್ 2024, 13:44 IST
Last Updated 6 ಏಪ್ರಿಲ್ 2024, 13:44 IST
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್
ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್    

ನವದೆಹಲಿ: ದೆಹಲಿ ವಕ್ಫ್‌ ಮಂಡಳಿಯಲ್ಲಿ ನೇಮಕಾತಿ ಹಾಗೂ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಎಎಪಿ ಶಾಸಕ ಅಮಾನತುಲ್ಲಾ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ದೂರಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಶನಿವಾರ ಆದೇಶ ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯದ ಅರ್ಜಿಗೆ ಸಂಬಂಧಿಸಿದಂತೆ ಖಾನ್ ಅವರಿಗೆ ಸಮನ್ಸ್ ಜಾರಿ ಮಾಡಬೇಕೆ ಎಂಬುದರ ಕುರಿತು ಏ. 9ರಂದು ನಿರ್ಧರಿಸುವುದಾಗಿ ಮೆಟ್ರೊಪಾಲಿಟನ್ ಸಹ ಮುಖ್ಯ ನ್ಯಾಯಾಧೀಶೆ ದಿವ್ಯಾ ಮಲ್ಹೋತ್ರಾ ತಿಳಿಸಿದ್ದಾರೆ.

‘ಸಾಕ್ಷಿಯಾಗಿದ್ದ ಖಾನ್ ಅವರು ನಿರೀಕ್ಷಣಾ ಜಾಮೀನು ಪಡೆಯುವುದರ ಮೂಲಕ ಈಗ ಆರೋಪಿಯಾಗಿದ್ದಾರೆ. ಜತೆಗೆ ತನಿಖೆಯಿಂದ ತಪ್ಪಿಸಿಕೊಂಡು ಪರಾರಿಯಾಗುವ ಯೋಜನೆ ಹೊಂದಿದ್ದಾರೆ. ಖಾನ್ ಅವರು ವಿಚಾರಣೆಗೆ ಹಾಜರಾಗದ ಕಾರಣ ಪ್ರಕರಣದ ತನಿಖೆ ಮುಗಿಯುತ್ತಿಲ್ಲ’ ಎಂದು ಜಾರಿ ನಿರ್ದೇಶನಾಲಯ ಪರ ವಿಶೇಷ ಸರ್ಕಾರಿ ಅಭಿಯೋಜಕ ಸೈಮನ್ ಬೆಂಜಮಿನ್ ಹೇಳಿದ್ದಾರೆ.

ADVERTISEMENT

'ಈ ಪ್ರಕರಣದಲ್ಲಿರುವ ಇತರ ಆರೋಪಿಗಳಿಗೆ ಖಾನ್ ನೆರವಾಗಿದ್ದಾರೆ. ಹೀಗಾಗಿ ಹಗರಣದಲ್ಲಿ ಇವರ ಪಾತ್ರ ದೊಡ್ಡದಿದೆ. ಆರೋಪಿಯನ್ನು ಈ ಹಿಂದೆ ಬಂಧಿಸಲಾಗಿದೆ ಮತ್ತು ಆರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ’ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

ಜಾರಿ ನಿರ್ದೇಶನಾಲಯವು ಇತ್ತೀಚೆಗೆ ಸಲ್ಲಿಸಿದ್ದ ಆರೋಪಪಟ್ಟಿಯಲ್ಲಿ ಓಕ್ಲಾ ಶಾಸಕ ಆಮ್ ಆದ್ಮಿ ಪಕ್ಷದ ಖಾನ್ ಅವರ ಹೆಸರನ್ನು ಕೈಬಿಟ್ಟಿತ್ತು. ಖಾನ್ ಅವರ ಸಹವರ್ತಿಗಳಾದ ಝೀಶಾನ್ ಹೈದರ್, ದಾವೂದ್ ನಾಸಿರ್ ಹಾಗೂ ಜವೇದ್ ಇಮಾಮ್ ಸಿದ್ಧಿಕಿ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಹೆಸರಿಸಿದೆ.

‘ದೆಹಲಿ ವಕ್ಫ್ ಮಂಡಳಿಯ ನೇಮಕಾತಿಯಲ್ಲಿ ಸಾಕಷ್ಟು ಅಕ್ರಮಗಳನ್ನು ಎಸಗಿರುವ ಖಾನ್, ಭಾರೀ ಮೊತ್ತದ ಹಣ ಪಡೆದಿದ್ದಾರೆ. ಜತೆಗೆ ಹಲವು ವಸ್ತುಗಳ ಖರೀದಿಯಲ್ಲೂ ತಮ್ಮ ಸಹವರ್ತಿಗಳೊಂದಿಗೆ ಜತೆಗೂಡಿ ಅಕ್ರಮ ಎಸಗಿದ್ದಾರೆ’ ಎಂದು ಕಳೆದ ಅಕ್ಟೋಬರ್‌ನಲ್ಲಿ ಜಾರಿ ನಿರ್ದೇಶನಾಲಯ ಆರೋಪಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯವನ್ನೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ನಡೆಸಿದ್ದರು. 2018ರಿಂದ 2022ರವರೆಗೆ ವಕ್ಫ್‌ ಮಂಡಳಿಯ ಆಸ್ತಿಯನ್ನು ಅಧ್ಯಕ್ಷರಾಗಿದ್ದ ಖಾನ್ ಅವರು ಅಕ್ರಮವಾಗಿ ಗುತ್ತಿಗೆ ನೀಡಿದ್ದಾರೆ ಎಂದೂ ಜಾರಿ ನಿರ್ದೇಶನಾಲಯ ಹೇಳಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೂಡಾ ಪ್ರಕರಣ ದಾಖಲಿಸಿದೆ. ಭೌತಿಕ ಮತ್ತು ಡಿಜಿಟಲ್ ರೂಪದ ಸಾಕ್ಷ್ಯಗಳನ್ನು ದಾಳಿ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.