ADVERTISEMENT

ದೆಹಲಿಯಲ್ಲಿ ಪರಿಸರ ಮಾಲಿನ್ಯ ನಿಯಮಗಳನ್ನು ಮುರಿದರೆ ಮೊದಲಿಗಿಂತಲೂ ಭಾರಿ ದಂಡ

ಪಿಟಿಐ
Published 10 ಜುಲೈ 2021, 15:59 IST
Last Updated 10 ಜುಲೈ 2021, 15:59 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೆಹಲಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ ಸಂದರ್ಭದಲ್ಲಿ ವಿಧಿಸಲಾಗುವ ದಂಡದ ಮೊತ್ತವನ್ನು ಪರಿಷ್ಕರಿಸಲಾಗಿದ್ದು, ಇನ್ನು ಮುಂದೆ ನಿಯಮಗಳ ಉಲ್ಲಂಘನೆ ಸ್ವರೂಪವನ್ನು ಆಧರಿಸಿ ₹ 10,000 ರಿಂದ ₹ 1 ಲಕ್ಷದವರೆಗೂ ದಂಡ ವಿಧಿಸಲು ಅವಕಾಶವಿದೆ.

ಪರಿಷ್ಕೃತ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ದೆಹಲಿ ಪರಿಸರ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಸಂಬಂಧಿತ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದೆ. ಪರಿಷ್ಕೃತ ನಿಯಮಗಳಂತೆ, ಅನುಮತಿ ಇಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಧ್ವನಿವರ್ಧಕ ಬಳಸಿದರೆ ₹ 10,000 ದಂಡ ವಿಧಿಸಬಹುದಾಗಿದೆ.

1,000 ಕೆವಿಎ ಗಿಂತಲೂ ಅಧಿಕ ಸಾಮರ್ಥ್ಯದ ಡೀಸೆಲ್ ಜನರೇಟರ್‌ (ಡಿ.ಜಿ) ಬಳಸಿದ ಸಂದರ್ಭದಲ್ಲಿ ₹ 1 ಲಕ್ಷ, 62.5 ಕೆವಿಎ ಯಿಂದ 1,000 ಕೆವಿಎ ಸಾಮರ್ಥ್ಯದವರೆಗಿನ ಡಿಜಿ ಬಳಕೆಗೆ ₹ 25,000 ದಂಡ ಹಾಗೂ 62.5 ಕೆವಿಎ ವರೆಗಿನ ಡಿಜಿ ಬಳಕೆಗೆ ₹ 10,000 ದಂಡ ವಿಧಿಸಲು ಅವಕಾಶವಿದೆ.

ADVERTISEMENT

ಶಬ್ದದ ತೀವ್ರತೆಯು ವಸತಿ ಪ್ರದೇಶಗಳಲ್ಲಿ ಹಗಲಿನ ಹೊತ್ತು 55 ಡೆಸಿಬಲ್‌ವರೆಗೂ ಮತ್ತು ರಾತ್ರಿಯ ಹೊತ್ತಿನಲ್ಲಿ 45 ಡೆಸಿಬಲ್‌ವರೆಗೆ ಇರಬಹುದು. ಅಂತೆಯೇ ವಾಣಿಜ್ಯ ಪ್ರದೇಶಗಳಲ್ಲಿ ಈ ಪ್ರಮಾಣ ಕ್ರಮವಾಗಿ 65 ಮತ್ತು 55 ಡೆಸಿಬಲ್‌ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಕ್ರಮವಾಗಿ 50 ಮತ್ತು 40 ಡೆಸಿಬಲ್‌ ಇರಬೇಕು ಎಂದು ತಿಳಿಸಲಾಗಿದೆ.

ಇದನ್ನು ಹೊರತುಪಡಿಸಿ ಶಾಲೆ, ಕಾಲೇಜು, ಆಸ್ಪತ್ರೆಗಳು, ಕೋರ್ಟ್‌ ಆವರಣದಿಂದ 100 ಮೀಟರ್‌ವರೆಗಿನ ವ್ಯಾಪ್ತಿಯನ್ನು ನಿಶ್ಯಬ್ದ ವಲಯ ಎಂದು ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.