ADVERTISEMENT

ವಶಪಡಿಸಿಕೊಂಡ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ 3 ತಿಂಗಳಲ್ಲಿ ಮಾರ್ಗಸೂಚಿ: ಕೇಂದ್ರ

ಪಿಟಿಐ
Published 14 ಡಿಸೆಂಬರ್ 2023, 13:58 IST
Last Updated 14 ಡಿಸೆಂಬರ್ 2023, 13:58 IST
<div class="paragraphs"><p>ಸಾಂದ‌ರ್ಭಿಕ ಚಿತ್ರ</p></div>

ಸಾಂದ‌ರ್ಭಿಕ ಚಿತ್ರ

   

ನವದೆಹಲಿ: ಮೊಬೈಲ್‌ ಫೋನ್ ಮತ್ತು ಲ್ಯಾಪ್‌ಟಾಪ್‌ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಕ್ರಿಮಿನಲ್ ಪ್ರಕರಣಗಳ ತನಿಖೆಯ ಸಂದರ್ಭದಲ್ಲಿ ವ್ಯಕ್ತಿಗಳಿಂದ, ಅದರಲ್ಲೂ ಮುಖ್ಯವಾಗಿ ಮಾಧ್ಯಮ ಪ್ರತಿನಿಧಿಗಳಿಂದ, ವಶಕ್ಕೆ ತೆಗೆದುಕೊಳ್ಳುವಾಗ ಪಾಲಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ರೂಪಿಸಲು ಹಲವು ಸುತ್ತಿನ ಮಾತುಕತೆ ನಡೆದಿದೆ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಗುರುವಾರ ತಿಳಿಸಿದೆ.

ಹೊಸ ಮಾರ್ಗಸೂಚಿಯು ಜಾರಿಗೆ ಬರುವವರೆಗೆ ಕೇಂದ್ರದ ತನಿಖಾ ಸಂಸ್ಥೆಗಳು ಇಂತಹ ಉಪಕರಣಗಳನ್ನು ವಶಕ್ಕೆ ತೆಗೆದುಕೊಳ್ಳುವ ಸಂದರ್ಭದಲ್ಲಿ ಸಿಬಿಐ ಪಾಲಿಸುತ್ತಿರುವ ನಿಯಮಗಳನ್ನೇ ಪಾಲಿಸಲಿವೆ ಎಂದು ಕೇಂದ್ರವು ಹೇಳಿದೆ.

ADVERTISEMENT

ನಿಯಮಗಳನ್ನು ಪಾಲಿಸದೆಯೇ ವ್ಯಕ್ತಿಗಳಿಂದ, ಅದರಲ್ಲೂ ಮುಖ್ಯವಾಗಿ ಮಾಧ್ಯಮ ಪ್ರತಿನಿಧಿಗಳಿಂದ, ಇಂತಹ ಉಪಕರಣಗಳನ್ನು ವಶಪಡಿಸಿಕೊಳ್ಳುವುದು ಗಂಭೀರ ವಿಚಾರ ಎಂದು ಹೇಳಿದ್ದ ಸುಪ್ರೀಂ ಕೋರ್ಟ್‌, ಈ ಪ್ರಕ್ರಿಯೆಗೆ ಅಗತ್ಯವಿರುವ ಮಾರ್ಗಸೂಚಿ ರೂಪಿಸಬೇಕು ಎಂದು ಕೇಂದ್ರಕ್ಕೆ ನವೆಂಬರ್ 7ರಂದು ಸೂಚನೆ ನೀಡಿತ್ತು.

ತನಿಖಾ ಸಂಸ್ಥೆಗಳು ಎಲೆಕ್ಟ್ರಾನಿಕ್ ಉಪಕರಣಗಳ ಶೋಧ ನಡೆಸುವಾಗ ಮತ್ತು ಅವುಗಳನ್ನು ವಶಕ್ಕೆ ಪಡೆಯುವಾಗ ಅನುಸರಿಸಬೇಕಿರುವ ಕ್ರಮಗಳ ಬಗ್ಗೆ ಸಮಗ್ರ ಮಾರ್ಗಸೂಚಿಯೊಂದು ಬೇಕು ಎಂಬ ಮನವಿ ಇರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು ನಡೆಸುತ್ತಿದೆ.

ವಿಧಿವಿಜ್ಞಾನ ಪ್ರಯೋಗಾಲಯಗಳು ಹಾಗೂ ತಜ್ಞರ ಜೊತೆ ಕೂಡ ಮಾತುಕತೆ ನಡೆಸಬೇಕಿರುವ ಕಾರಣ ಮಾರ್ಗಸೂಚಿಗಳನ್ನು ಅಂತಿಮಗೊಳಿಸಲು ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಕೇಂದ್ರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ಪೀಠಕ್ಕೆ ಮಾಹಿತಿ ನೀಡಿದರು.

‘ಈ ಕಾರಣದಿಂದಾಗಿಯೇ ಅರ್ಜಿದಾರರಿಗೆ ಕಳವಳ ಉಂಟಾಗಿದೆ. ಎಷ್ಟು ಸಮಯ ಬೇಕು ಎಂದು ನಿಮಗೆ ಅನ್ನಿಸುತ್ತಿದೆ? ನೀವು ಸಭೆಗಳನ್ನು ನಡೆಸುತ್ತಿದ್ದೀರಿ. ಆದರೆ, ಮಾರ್ಗಸೂಚಿ ಯಾವಾಗ ಬರುತ್ತದೆ’ ಎಂದು ಪೀಠವು ರಾಜು ಅವರನ್ನು ಪ್ರಶ್ನಿಸಿತು. ಇನ್ನು ಮೂರು ತಿಂಗಳ ಕಾಲಾವಕಾಶ ಬೇಕು ಎಂದು ರಾಜು ಹೇಳಿದರು. ವಿಚಾರಣೆಯನ್ನು ಫೆಬ್ರುವರಿ 6ಕ್ಕೆ ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.