ADVERTISEMENT

ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು ಹೋಗಿ 3ನೇ ಮಹಡಿಯಿಂದ ಜಿಗಿದ ಅಮೆಜಾನ್ ಡೆಲಿವರಿ ಏಜೆಂಟ್

ಐಎಎನ್ಎಸ್
Published 22 ಮೇ 2023, 10:06 IST
Last Updated 22 ಮೇ 2023, 10:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಹೈದರಾಬಾದ್: ನಾಯಿ ದಾಳಿಯಿಂದ ರಕ್ಷಿಸಿಕೊಳ್ಳಲು ಅಮೆಜಾನ್‌ ಡೆಲಿವರಿ ಏಜೆಂಟ್‌ವೊಬ್ಬರು ಕಟ್ಟಡದ ಮೂರನೇ ಮಹಡಿಯಿಂದ ಜಿಗಿದು ಗಾಯಗೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.

ಮಣಿಕೊಂಡದ ಪಂಚವಟಿ ಕಾಲೋನಿ ಎಂಬಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಮೊಹಮ್ಮದ್ ಇಲ್ಯಾಸ್ (27) ಗಾಯಗೊಂಡವರು. ಅಮೆಜಾನ್‌ನಲ್ಲಿ ಅವರು ಡೆಲಿವರಿ ಏಜೆಂಟ್‌ಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ADVERTISEMENT

ಡೆಲವರಿ ತಲುಪಿಸುವ ಸಲುವಾಗಿ ಗ್ರಾಹಕರೊಬ್ಬರ ಮನೆಗೆ ಹೋದ ಸಮಯದಲ್ಲಿ ಇಲ್ಯಾಸ್ ಮೇಲೆ ಸಾಕು ನಾಯಿ ಲ್ಯಾಬ್ರಡಾರ್ ದಾಳಿ ಮಾಡಿದೆ. ಭಯಭೀತರಾದ ಇಲ್ಯಾಸ್‌ ಮೂರನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಟ್ಟಡದ ಪಕ್ಕದ ಗೋಡೆಯ ಮೇಲೆ ಬಿದ್ದ ಇಲ್ಯಾಸ್‌ಗೆ ಮೂಳೆ ಮುರಿತಗಳು ಉಂಟಾಗಿವೆ. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಲ್ಯಾಸ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಇಲ್ಯಾಸ್ ಹೇಳಿಕೆ ಪಡೆದುಕೊಂಡು, ಮನೆ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 289 (ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿ, ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಯದುರ್ಗ ಪೊಲೀಸರು ಹೇಳಿದ್ದಾರೆ.

ನಾಲ್ಕು ತಿಂಗಳಲ್ಲಿ ಹೈದರಾಬಾದ್‌ನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ.

ಇದೇ ಜನವರಿಯಲ್ಲಿ, ಸ್ವಿಗ್ಗಿ ಆಪ್‌ನಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ರಿಜ್ವಾನ್(23) ಇಂತಹದ್ದೇ ಘಟನೆಯಲ್ಲಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.