ADVERTISEMENT

ತುಳು, ಬಂಜಾರ ಭಾಷೆ ಸೇರ್ಪಡೆ ಬೇಡಿಕೆ: ನಿಗದಿತ ಮಾನದಂಡಗಳಿಲ್ಲ

8ನೇ ಪರಿಚ್ಛೇದಕ್ಕೆ ತುಳು, ಬಂಜಾರ ಭಾಷೆ ಸೇರ್ಪಡೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2023, 19:23 IST
Last Updated 28 ಮಾರ್ಚ್ 2023, 19:23 IST
   

ನವದೆಹಲಿ: ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ತುಳು ಸೇರಿದಂತೆ ಹಲವು ಭಾಷೆಗಳ ಸೇರ್ಪಡೆಗೆ ಬೇಡಿಕೆ ಇದೆ. ಆದರೂ, ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಯಾವುದೇ ಭಾಷೆಯನ್ನು ಪರಿಗಣಿಸಲು ನಿಗದಿತ ಮಾನದಂಡಗಳಿಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಮಂಗಳವಾರ ತಿಳಿಸಿದರು.

ತುಳು ಹಾಗೂ ಬಂಜಾರ ಭಾಷೆಗಳನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳೇನು ಎಂದು ಕಲಬುರ್ಗಿಯ ಬಿಜೆಪಿ ಸಂಸದ ಡಾ. ಉಮೇಶ ಜಾಧವ್‌ ಕೇಳಿರುವ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಸಚಿವರು, ‘ಎಂಟನೇ ಪರಿಚ್ಛೇದಕ್ಕೆ ಭಾಷೆಗಳ ಸೇರ್ಪಡೆಗೆ ಕಾಲ ಕಾಲಕ್ಕೆ ಬೇಡಿಕೆಗಳು ಬಂದಿವೆ’ ಎಂದಿದ್ದಾರೆ.

‘ಸಂಸ್ಕೃತ-ಅಧಿಕೃತ ಭಾಷೆಯನ್ನಾಗಿಸುವ ಪ್ರಸ್ತಾವ ಇಲ್ಲ’: ‘ಸಂಸ್ಕೃತವನ್ನು ಸಂವಹನ ಮತ್ತು ಅಧಿಕೃತ ಭಾಷೆಯನ್ನಾಗಿ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಪರಿಶೀಲನೆಯಲ್ಲಿಲ್ಲ’ ಎಂದು ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್‌ ಕುಮಾರ್‌ ಮಿಶ್ರಾ ಲೋಕಸಭೆಯಲ್ಲಿ ಮಂಗಳವಾರ ತಿಳಿಸಿದ್ದಾರೆ.

ADVERTISEMENT

ಬಿಜೆಪಿ ಸದಸ್ಯ ಸುಬ್ರತ್‌ ಪಾಠಕ್‌ ಅವರು, ‘ಹಿಂದಿ ಭಾಷೆಯ ಜೊತೆಗೆ ಸಂಸ್ಕೃತವನ್ನೂ ಸಂವಹನ ಮತ್ತು ಅಧಿಕೃತ ಭಾಷೆಯನ್ನಾಗಿ ಮಾಡಲು ಸರ್ಕಾರ ಚಿಂತಿಸುತ್ತಿದೆಯೇ’ ಎಂದು ಕೇಳಿದ ಪ್ರಶ್ನೆಗೆ ಮಿಶ್ರಾ ಅವರು ನೀಡಿರುವ ಲಿಖಿತ ಉತ್ತರದಲ್ಲಿ ಈ ವಿಷಯ ತಿಳಿಸಿದ್ದಾರೆ.

ಸ್ವಾಮಿತ್ವ: 3,223 ಹಳ್ಳಿಗಳಲ್ಲಿ ಆಸ್ತಿಗಳ ಸಮೀಕ್ಷೆ

ನವದೆಹಲಿ: ಕೇಂದ್ರ ಸರ್ಕಾರದ ಸ್ವಾಮಿತ್ವ ಯೋಜನೆಯಡಿ ಕರ್ನಾಟಕದ 3,223 ಹಳ್ಳಿಗಳಲ್ಲಿ ಈ ವರೆಗೆ ಡ್ರೋನ್‌ ಮೂಲಕ ಆಸ್ತಿಗಳ ಸಮೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಪಂಚಾಯತ್‌ರಾಜ್ ಸಚಿವ ಗಿರಿರಾಜ್ ಸಿಂಗ್‌ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಷ್‌ ಅವರ ಪ್ರಶ್ನೆಗೆ ಮಂಗಳವಾರ ಲಿಖಿತ ಉತ್ತರ ನೀಡಿರುವ ಅವರು, ‘ಕೇಂದ್ರ ಪಂಚಾಯತ್‌ರಾಜ್‌, ರಾಜ್ಯ ಕಂದಾಯ, ರಾಜ್ಯ ಪಂಚಾಯತ್‌ರಾಜ್‌ ಇಲಾಖೆ ಹಾಗೂ ಸರ್ವೆ ಆಫ್‌ ಇಂಡಿಯಾದ ಸಹಯೋಗದಲ್ಲಿ ತಂತ್ರಜ್ಞಾನದ ನೆರವಿನಿಂದ ಆಸ್ತಿಗಳ ಸಮೀಕ್ಷೆ ನಡೆಸಲಾಗುತ್ತಿದೆ. ಈ ಯೋಜನೆಯ ಅನುಷ್ಠಾನಕ್ಕೆ 31 ರಾಜ್ಯಗಳ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.

ಕರ್ನಾಟಕದ ಎಲ್ಲ ಗ್ರಾಮೀಣ ಜನವಸತಿ ಪ್ರದೇಶಗಳಲ್ಲಿ 2025ರೊಳಗೆ ಸಮೀಕ್ಷೆ ನಡೆಸುವ ಗುರಿ ಇರಿಸಿಕೊಳ್ಳಲಾಗಿದೆ. ಈ ಯೋಜನೆಗೆ 2020ರಿಂದ 2025ರ ವರೆಗೆ ₹566 ಕೋಟಿ ಮೀಸಲಿಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.