ನವದೆಹಲಿ: ‘ದೈಹಿಕ ಮಿತಿ ಆಧಾರದ ಮೇಲೆ ಭಾರತೀಯ ಸೇನೆಯಲ್ಲಿ ಮಹಿಳೆಯರಿಗೆ ಕಮಾಂಡರ್ ಹುದ್ದೆಗಳನ್ನು ನಿರಾಕರಿಸುವ ಕೇಂದ್ರ ಸರ್ಕಾರದ ನಿರ್ಣಯ ಪ್ರಗತಿ ವಿರೋಧಿಯಾದುದು. ಇದು ಪ್ರಸ್ತುತ ಇರುವ ದಾಖಲೆಗಳಿಗೆ ವಿರೋಧಾಭಾಸ’ ಎಂದು ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿಗಳು ಸುಪ್ರೀಂ ಕೋರ್ಟ್‌ಗೆ ಮಾಹಿತಿ ಸಲ್ಲಿಸಿದ್ದಾರೆ.
‘ಮಹಿಳೆಯರಿಗೆ ಕಮಾಂಡರ್ ಹುದ್ದೆ ನಿರಾಕರಿಸಲು ಕೇಂದ್ರ ಸರ್ಕಾರ ನೀಡುತ್ತಿರುವ ಕಾರಣ ದುರದೃಷ್ಟಕರ. ಈ ಕಾರಣವನ್ನು ಸುಪ್ರೀಂ ಕೋರ್ಟ್ ನಿರಾಕರಿಸಬೇಕು’ ಎಂದು ‘ಸುಪ್ರೀಂ’ಗೆ ಸಲ್ಲಿಸಿರುವ ಲಿಖಿತ ಅರ್ಜಿಯಲ್ಲಿ ಮಹಿಳಾ ಅಧಿಕಾರಿಗಳು ಕೋರಿದ್ದಾರೆ.
‘ಸೇನೆಯಲ್ಲಿ ತಮ್ಮ ಸಹೋದ್ಯೋಗಿಗಳೊಂದಿಗೆ ಮಹಿಳಾ ಅಧಿಕಾರಿಗಳು ಸಮಾನವಾಗಿ ಶ್ರಮಿಸುತ್ತಿದ್ದಾರೆ. ಶಾಂತಿಯುತ ಹಾಗೂ ಬಿಕ್ಕಟ್ಟು ಪೀಡಿತ ಪ್ರದೇಶ ಎರಡೂ ಕಡೆಗಳಲ್ಲಿ ಮಹಿಳೆಯರು ಯೋಧರ ಪಡೆಯನ್ನು ಮುನ್ನಡೆಸಿದ್ದಾರೆ. ಯೋಧರು ಮಹಿಳೆಯರ ನಾಯಕತ್ವವನ್ನು ನಿರಾಕರಿಸಿದ ಉದಾಹರಣೆಯೇ ಇಲ್ಲ. ತಮಗೆ ವಹಿಸಲಾದ ಜವಾಬ್ದಾರಿಯನ್ನು ಮಹಿಳಾ ಅಧಿಕಾರಿಗಳು ಸಮರ್ಥವಾಗಿ ನಿಭಾಯಿಸಿದ್ದಾರೆ’ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ವಾಯುಪಡೆ ಹಾಗೂ ನೌಕಾಪಡೆಯಲ್ಲಿ ಮಹಿಳಾ ಅಧಿಕಾರಿಗಳಿಗೆ ಕಮಾಂಡರ್ ಹುದ್ದೆಗಳನ್ನು ನೀಡುವ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿಯನ್ನು ಇದೇ 11ರಂದು ಪರಿಶೀಲನೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.