
ದೆಹಲಿಯಾದ್ಯಂತ ಆವರಿಸಿದ ದಟ್ಟ ಹೊಗೆ
ನವದೆಹಲಿ: ಇಥಿಯೋಪಿಯಾದ ಜ್ವಾಲಾಮುಖಿಯ ಸ್ಫೋಟದಿಂದ ಉಂಟಾಗಿರುವ ಬೂದಿಯು ದೆಹಲಿಯ ಮಾಲಿನ್ಯ ಮಟ್ಟವನ್ನು ಮತ್ತಷ್ಟು ಹದಗೆಡಿಸಬಹುದೆಂಬ ಆತಂಕದ ನಡುವೆ, ಮಂಗಳವಾರ ದೆಹಲಿಯಾದ್ಯಂತ ಬೂದಿಯ ಮೋಡಗಳು ಆವರಿಸಿದ್ದವು. ನಗರದ ಗಾಳಿಯ ಗುಣಮಟ್ಟವೂ 'ತುಂಬಾ ಕಳಪೆ'ಯಾಗಿದೆ.
ಇಥಿಯೋಪಿಯಾದ ಅಫಾರ್ ವಲಯದಲ್ಲಿ ಹೈಲಿ ಗುಬ್ಬಿ ಜ್ವಾಲಾಮುಖಿ ಭಾನುವಾರ ಸ್ಫೋಟಗೊಂಡು, ಸುಮಾರು 14 ಕಿ.ಮೀ (45,000 ಅಡಿ) ಎತ್ತರಕ್ಕೆ ಹಾರಿ ಕೆಂಪು ಸಮುದ್ರದಾದ್ಯಂತ ಪೂರ್ವಕ್ಕೆ ವ್ಯಾಪಿಸಿತು. ಬೂದಿಯ ಮೋಡಗಳು ಚೀನಾದ ಕಡೆಗೆ ಚಲಿಸುತ್ತಿದ್ದು, ಮಂಗಳವಾರ ಸಂಜೆ 7.30ರ ವೇಳೆಗೆ ಭಾರತದಿಂದ ದೂರ ಸರಿಯಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.
ಗುಜರಾತ್, ದೆಹಲಿ-ಎನ್‌ಸಿಆರ್, ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದಲ್ಲೂ ಈ ಬೂದಿಯು ಪರಿಣಾಮ ಬೀರಬಹುದು ಎಂದು ಮಂಗಳವಾರ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಬೆಳಗಿನ ವಾಯು ಗುಣಮಟ್ಟ ಕುರಿತು ಹೊರಡಿಸಿದ ಪ್ರಕಟಣೆ ಪ್ರಕಾರ, ‘ದೆಹಲಿಯಲ್ಲಿ ವಾಯು ಗುಣಮಟ್ಟದ ಸೂಚ್ಯಂಕ (ಎಕ್ಯೂಐ) ಸೋಮವಾರ 382 ದಾಖಲಾಗಿತ್ತು. ಮಂಗಳವಾರ 360ಕ್ಕೆ ಇಳಿದಿದೆ. 'ತುಂಬಾ ಕಳಪೆ' ವರ್ಗದಲ್ಲಿಯೇ ಉಳಿದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.