ADVERTISEMENT

ಡೇರಾ ಸಚ್ಚಾ ಸೌದಾದ ಗುರ್ಮೀತ್ ಸಿಂಗ್‌ಗೆ 40 ದಿನಗಳ ಪೆರೋಲ್: ಇದು 15ನೇ ಬಾರಿ

ಪಿಟಿಐ
Published 4 ಜನವರಿ 2026, 7:28 IST
Last Updated 4 ಜನವರಿ 2026, 7:28 IST
ಗುರ್ಮೀತ್ ರಾಮ್ ರಹೀಮ್ ಸಿಂಗ್ (ಸಂಗ್ರಹ ಚಿತ್ರ)
ಗುರ್ಮೀತ್ ರಾಮ್ ರಹೀಮ್ ಸಿಂಗ್ (ಸಂಗ್ರಹ ಚಿತ್ರ)   

ಚಂಡೀಗಢ: ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ಗೆ ಮತ್ತೆ 40 ದಿನಗಳ ಪೆರೋಲ್‌ ನೀಡಲಾಗಿದೆ.  

ಸದ್ಯ ಗುರ್ಮೀತ್‌ ಹರಿಯಾಣದ ರೋಹ್ಟಕ್‌ನ ಸುನಾರಿಯಾ ಜೈಲಿನಲ್ಲಿದ್ದಾನೆ. ಅತ್ಯಾಚಾರ ಪ್ರಕರಣದಲ್ಲಿ 2017ರಲ್ಲಿ  ಶಿಕ್ಷಗೆ ಒಳಗಾದ ನಂತರ ಇದುವರೆಗೆ 14 ಬಾರಿ ಪೆರೋಲ್‌ ಪಡೆದು ಜೈಲಿನಿಂದ ಹೊರಬಂದಿದ್ದಾನೆ. 2025ರ ಆಗಸ್ಟ್‌ನಲ್ಲೂ ಗುರ್ಮೀತ್‌ಗೆ 40 ದಿನಗಳ ಪೆರೋಲ್‌ ಲಭಿಸಿತ್ತು. 

2024ರ ಅಕ್ಟೋಬರ್‌ನಲ್ಲಿ 20 ದಿನ,  2025ರ ಏಪ್ರಿಲ್‌ನಲ್ಲಿ 21 ದಿನ, 2025ರ ಜನವರಿಯಲ್ಲಿ 30 ದಿನ ಪೆರೋಲ್‌ ಲಭಿಸಿತ್ತು. ದೆಹಲಿ, ಹರಿಯಾಣ, ಪಂಜಾಬ್‌ ವಿಧಾನಸಭಾ ಚುನಾವಣೆಗಳ ಸಂದರ್ಭದಲ್ಲೂ ಗುರ್ಮೀತ್‌ಗೆ ಪೆರೋಲ್ ನೀಡಲಾಗಿತ್ತು. 16 ವರ್ಷಗಳ ಹಿಂದೆ ನಡೆದಿದ್ದ ಪತ್ರಕರ್ತನ ಕೊಲೆ ಪ್ರಕರಣದಲ್ಲಿ ಸಿಂಗ್‌ ಮತ್ತು ಇತರ ಮೂವರು ಆರೋಪಿಗಳ ವಿರುದ್ಧ 2019ರಲ್ಲಿ ಆರೋಪ ಸಾಬೀತಾಗಿತ್ತು.

ADVERTISEMENT

2002ರಲ್ಲಿ ನಡೆದಿದ್ದ ಡೇರಾ ಸಚ್ಚಾ ಸೌದಾದ ಮಾಜಿ ವ್ಯವಸ್ಥಾಪಕ ರಂಜಿತ್‌ ಸಿಂಗ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ ಮತ್ತು ಹರಿಯಾಣ ಕೋರ್ಟ್‌ ಸಿಂಗ್‌ ಮತ್ತು ಇತರೆ ನಾಲ್ವರು ಆರೋಪಿಗಳನ್ನು 2024ರ ಮೇ ತಿಂಗಳಲ್ಲಿ ಖುಲಾಸೆಗೊಳಿಸಿತ್ತು.  

ಶಿರೋಮಣಿ ಗುರುದ್ವಾರ ಪ್ರಬಂಧಕ್‌ ಸಮಿತಿ ಸೇರಿದಂತೆ ಸಿಖ್‌ ಸಂಘಟನೆಗಳು ಸಿಂಗ್‌ಗೆ ಪೆರೋಲ್‌ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. 

ಹಿಂದೆ 14 ಬಾರಿ ಪೆರೋಲ್‌ ಲಭಿಸಿದ ಸಂದರ್ಭದಲ್ಲೂ ಸಿಂಗ್‌ ಉತ್ತರ ಪ್ರದೇಶದ ಬಾಗ್ಪತ್‌ ಜಿಲ್ಲೆಯಲ್ಲಿರುವ ಡೇರಾ ಸಚ್ಚಾ ಸೌದಾದ ಆಶ್ರಮದಲ್ಲೇ ವಾಸ್ತವ್ಯ ಹೂಡಿದ್ದ. ಹರಿಯಾಣದ ಸಿರ್ಸಾ ಜಿಲ್ಲೆಯಲ್ಲಿ ಪ್ರಧಾನ ಕಚೇರಿ ಹೊಂದಿರುವ ಡೇರಾ ಸಚ್ಚಾ ಸೌದಾಕ್ಕೆ  ಹರಿಯಾಣ, ಪಂಜಾಬ್‌, ರಾಜಸ್ಥಾನದಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.