ADVERTISEMENT

ಐದು ತಿಂಗಳ ನಂತರ ವೈಷ್ಣೋದೇವಿ ದರ್ಶನ

ವೈಷ್ಣೋದೇವಿ ಯಾತ್ರೆಗೆ ಅನುಮತಿ, ತೆರೆಯಿತು ದೇಗುಲದ ಬಾಗಿಲು

ಪಿಟಿಐ
Published 16 ಆಗಸ್ಟ್ 2020, 6:26 IST
Last Updated 16 ಆಗಸ್ಟ್ 2020, 6:26 IST
ಕಾತ್ರಾದ ತ್ರಿಕುಟ ಬೆಟ್ಟದಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗ
ಕಾತ್ರಾದ ತ್ರಿಕುಟ ಬೆಟ್ಟದಲ್ಲಿರುವ ವೈಷ್ಣೋದೇವಿ ದೇಗುಲಕ್ಕೆ ಹೋಗುವ ಮಾರ್ಗ   

ಕಾತ್ರಾ (ಜಮ್ಮು): ಇಲ್ಲಿನ ತ್ರಿಕುಟಾ ಬೆಟ್ಟದಲ್ಲಿರುವ ಪ್ರಸಿದ್ಧ ಯಾತ್ರಾಸ್ಥಳ ವೈಷ್ಣೋದೇವಿ ದೇಗುಲ ಭೇಟಿಗೆ ಸರ್ಕಾರ ಅನುಮತಿ ನೀಡಿದ್ದು, ಜಮ್ಮುವಿನ ಖುಷ್ವಿಂದರ್ ಸಿಂಗ್ ಅವರ ನೇತೃತ್ವದ 12 ಸದಸ್ಯರ ತಂಡ ಭಾನುವಾರ ಮುಂಜಾನೆ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ.

ಕೋವಿಡ್‌ 19 ಸೋಂಕಿನ ಕಾರಣದಿಂದ ಐದು ತಿಂಗಳಿನಿಂದ ವೈಷ್ಣೋದೇವಿ ದೇವಾಲಯ ಕೇಂದ್ರವನ್ನು ಮುಚ್ಚಲಾಗಿತ್ತು. ಭಾನುವಾರದಿಂದ ದೇಗುಲ ದರ್ಶನಕ್ಕೆ ಸರ್ಕಾರ ಅನುಮತಿ ನೀಡಿತ್ತು. ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಮೊದಲ ತಂಡದಲ್ಲಿ ಖುಷ್ವಿಂದರ್ ಸಿಂಗ್ ಮತ್ತು ಸದಸ್ಯರು ಇದ್ದರು.

ಜಮ್ಮುವಿನಿಂದ ಹೊರಟ ಖುಷ್ವಿಂದರ್ ತಂಡ, ಮುಂಜಾನೆ ನಾಲ್ಕು ಗಂಟೆಗೆ ಕಾತ್ರಾದಲ್ಲಿರುವ ದೇಗುಲಕ್ಕೆ ಭೇಟಿ ನೀಡುವ ಯಾತ್ರಿಕರ ಶಿಬಿರವನ್ನು ತಲುಪಿತು. ‘ನಾನು ಪ್ರತಿ ತಿಂಗಳು ಒಮ್ಮೆಯಾದರೂ ಪ್ರಾರ್ಥನೆ ಸಲ್ಲಿಸಲು ಈ ದೇಗುಲಕ್ಕೆ ಬರುತ್ತಿದ್ದೆ. ಕೋವಿಡ್‌ನಿಂದಾಗಿ ದೇವಾಲಯವನ್ನು ಮುಚ್ಚಲಾಗಿತ್ತು. ಈಗ ದೇಗುಲ ತೆರೆಯಲು ಅನುಮತಿ ಕೊಟ್ಟ ಮೊದಲ ದಿನವೇ ದೇವರ ದರ್ಶನಕ್ಕೆ ಬಂದಿದ್ದೇನೆ’ ಎಂದು 48 ವರ್ಷದ ಖುಷ್ವಿಂದರ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ಬೆಳಿಗ್ಗೆ 6 ಗಂಟೆಗೆ ದೇವಾಲಯದ ದ್ವಾರಗಳು ತೆರೆದವು. ದೇಗುಲ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಮೇಶ್ ಕುಮಾರ್ ಅವರು ಯಾತ್ರಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ, ಎಲ್ಲ ರೀತಿಯ ಕ್ರಮಗಳನ್ನು ಕೊನೆಯವರೆಗೂ ಪರಿಶೀಲಿಸಿ, ನಂತರ ಯಾತ್ರಾರ್ಥಿಗಳನ್ನು ದರ್ಶನಕ್ಕೆ ಬಿಡುವ ವ್ಯವಸ್ಥೆ ಮಾಡಿದ್ದಾರೆ.

ಕೋವಿಡ್ 19ರ ಕಾರಣದಿಂದಾಗಿ ಮಾರ್ಚ್‌ 18 ರಂದು ದೇವಾಲಯವನ್ನು ಮುಚ್ಚಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.