
ಫರೂಕಾಬಾದ್/ಮೈನ್‌ಪುರಿ: ಶಾಲೆಗಳಲ್ಲಿ ಜಂತುಹುಳು ನಿವಾರಣೆಗಾಗಿ ನೀಡಿದ ಮಾತ್ರೆ ಸೇವಿಸಿದ 120 ವಿದ್ಯಾರ್ಥಿಗಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವ ಪ್ರಕರಣ ಉತ್ತರ ಪ್ರದೇಶದ ಫರೂಕಾಬಾದ್ ಹಾಗೂ ಮೈನ್‌ಪುರಿ ಜಿಲ್ಲೆಗಳಲ್ಲಿ ಮಂಗಳವಾರ ವರದಿಯಾಗಿದೆ.
ಜಂತುಹುಳು ನಿವಾರಣೆಗಾಗಿ ಅಲ್ಬೆಂಡಜೋಲ್ ಮಾತ್ರೆಗಳನ್ನು ನೀಡಲಾಗಿತ್ತು. ಅದನ್ನು ಸೇವಿಸಿದ ನಂತರ ಮಕ್ಕಳಲ್ಲಿ ತಲೆನೋವು, ವಾಂತಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫರೂಕಾಬಾದ್‌ನ ರಾಥೋರಾ ಮೊಹದ್ದೀನ್‌ಪುರ ಗ್ರಾಮದ ಜವಹಾರ್ ಲಾಲ್ ಪ್ರೇಮಾ ಶಾಲೆಯಲ್ಲಿ ಮಾತ್ರೆ ಸೇವಿಸಿದ ಸುಮಾರು 150 ಮಕ್ಕಳಲ್ಲಿ 100 ಮಂದಿ ಅಸ್ವಸ್ಥರಾಗಿದ್ದರು. ಇದರಿಂದಾಗಿ, ಶಾಲಾಡಳಿತ ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಯಾಗಿದೆ.
33 ವಿದ್ಯಾರ್ಥಿಗಳನ್ನು ಕಮಲಗಂಜ್ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಉಳಿದ 67 ಮಕ್ಕಳನ್ನು ಜಿಲ್ಲಾ ಕೇಂದ್ರದಲ್ಲಿರುವ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಜಿಲ್ಲಾಧಿಕಾರಿ ಅಶುತೋಷ್ ಕುಮಾರ್ ದ್ವಿವೇದಿ ಅವರು ಲೋಹಿಯಾ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ.
ಜಿಲ್ಲೆಯಾದ್ಯಂತ ಎಲ್ಲ ಶಾಲೆಗಳಲ್ಲೂ ಜಂತುಹುಳು ನಿವಾರಣಾ ಅಭಿಯಾನ ಆರಂಭಿಸಲಾಗಿದೆ. ಆದರೆ, ಆ ಶಾಲೆಯಲ್ಲಷ್ಟೇ ಸಮಸ್ಯೆ ಕಾಣಿಸಿಕೊಂಡಿದೆ. ಸದ್ಯ ಎಲ್ಲ ಮಕ್ಕಳ ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾ ಮುಖ್ಯ ಆರೋಗ್ಯಾಧಿಕಾರಿ ಡಾ. ಅವನೀಂದ್ರ ಕುಮಾರ್ ತಿಳಿಸಿದ್ದಾರೆ.
ಇತ್ತ, ಮೈನ್‌ಪುರಿ ಜಿಲ್ಲೆಯ ನಗ್ಲಾ ಕೀರತ್‌ಪುರ ಶಾಲೆಯಲ್ಲಿ ಮಾತ್ರೆ ಸೇವಿಸಿದ ಸುಮಾರು 20 ಮಕ್ಕಳ ಆರೋಗ್ಯ ಹದಗೆಟ್ಟಿದೆ.
ಆರೋಗ್ಯದಲ್ಲಿ ಏರುಪೇರಾಗುತ್ತಿದ್ದಂತೆಯೇ ಎಲ್ಲ ಮಕ್ಕಳನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅವರಲ್ಲಿ, ಹೆಚ್ಚಿನವರು ಮನೆಗೆ ಮರಳಿದ್ದಾರೆ ಎಂದು ಮುಖ್ಯ ಆರೋಗ್ಯಾಧಿಕಾರಿ ಡಾ. ಆರ್.ಸಿ. ಗುಪ್ತಾ ಹೇಳಿದ್ದಾರೆ.
ಮೊದಲು ಇಬ್ಬರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ನಂತರ ಇತರ ವಿದ್ಯಾರ್ಥಿಗಳೂ ಪೋಷಕರೊಂದಿಗೆ ಆಸ್ಪತ್ರೆಗೆ ಬಂದರು. ಬಹುಶಃ ಆತಂಕದಿಂದಾಗಿ ಅವರಿಗೂ ಸಮಸ್ಯೆ ಕಾಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದ ಅಂಗವಾಗಿ 2 ರಿಂದ 19 ವರ್ಷದೊಳಗಿನ ಮಕ್ಕಳಿಗಾಗಿ ಪ್ರತಿವರ್ಷ ಫೆಬ್ರುವರಿ 10 ಹಾಗೂ ಆಗಸ್ಟ್ 10ರಂದು ಅಭಿಯಾನ ನಡೆಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.