ADVERTISEMENT

ಇನ್ನು ವಿಮಾನದಲ್ಲಿ ಪವರ್ ಬ್ಯಾಂಕ್ ಬಳಸುವಂತಿಲ್ಲ: DGCA ಹೊಸ ಮಾರ್ಗಸೂಚಿ

ಏಜೆನ್ಸೀಸ್
Published 4 ಜನವರಿ 2026, 10:22 IST
Last Updated 4 ಜನವರಿ 2026, 10:22 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ವಿಮಾನದಲ್ಲಿ ಪ್ರಯಾಣಿಸುವಾಗ ಇನ್ನು ಮುಂದೆ ಪವರ್ ಬ್ಯಾಂಕ್‌ಗಳ ಬಳಕೆ ಮತ್ತು ಅವುಗಳನ್ನು ಚಾರ್ಜ್‌ ಮಾಡುವುದನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ನಿಷೇಧಿಸಿದೆ.

ಪವರ್ ಬ್ಯಾಂಕ್‌ಗಳಲ್ಲಿರುವ ಲಿಥಿಯಂ ಬ್ಯಾಟರಿಗಳಿಂದ ಅಗ್ನಿ ಅವಘಡಗಳು ಸಂಭವಿಸುವ ಕಾರಣದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ. 

ADVERTISEMENT

ಕಳೆದ ಅಕ್ಟೋಬರ್‌ನಲ್ಲಿ ದೆಹಲಿಯ ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಇಂಡಿಗೊ ವಿಮಾನದಲ್ಲಿ ಪ್ರಯಾಣಿಕರೊಬ್ಬರ ಪವರ್ ಬ್ಯಾಂಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಕ್ಯಾಬಿನ್‌ ಸಿಬ್ಬಂದಿ ತಕ್ಷಣವೇ ಕ್ರಮ ಕೈಗೊಂಡಿದ್ದರಿಂದ ದೊಡ್ಡ ಅನಾಹುತ ತಪ್ಪಿತ್ತು. 

ಈ ಘಟನೆಯ ಬಳಿಕ ಎಚ್ಚೆತ್ತುಕೊಂಡ ಡಿಜಿಸಿಎ, ಪವರ್‌ ಬ್ಯಾಂಕ್‌ಗಳನ್ನು ಹ್ಯಾಂಡ್‌ಬ್ಯಾಗ್‌ನಲ್ಲಿ ಇರಿಸಿಕೊಳ್ಳಬಹುದೇ ವಿನಃ, ಮೇಲ್ಭಾಗದಲ್ಲಿ ಲಗೇಜ್‌ ಇಡುವ ಕ್ಯಾಬಿನ್‌ನಲ್ಲೂ ಇಡುವಂತಿಲ್ಲ.

ಪವರ್‌ ಬ್ಯಾಂಕ್‌ ಬಳಕೆ ಮಾಡುವುದು ಮತ್ತು ಸೀಟ್‌ ಪಕ್ಕದಲ್ಲಿರುವ ಚಾರ್ಜಿಂಗ್‌ ಪಾಯಿಂಟ್‌ನಿಂದ ಅದನ್ನು ಚಾರ್ಜಿಂಗ್‌ಗೆ ಇಡುವಂತಿಲ್ಲ ಎಂದು ಸೂಚಿಸಿದೆ.

ಅತಿಯಾಗಿ ಚಾರ್ಜ್‌ಗೆ ಹಾಕುವುದು, ಅಧಿಕ ಉಷ್ಣತೆ, ಕಳಪೆ ಗುಣಮಟ್ಟದ ಉತ್ಪನ್ನ, ಹಳೆಯ ಬ್ಯಾಟರಿಗಳಿದ್ದರೆ, ಪವರ್‌ ಬ್ಯಾಂಕ್‌ಗಳನ್ನು ಸರಿಯಾಗಿ ಜೋಪಾನ ಮಾಡದೆ ಹಾನಿಯಾಗಿದ್ದರೆ ಅದರಲ್ಲಿನ ಲಿಥಿಯಂ ಬ್ಯಾಟರಿಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತದೆ. ಈ ಬೆಂಕಿ ಹೆಚ್ಚು ಶಕ್ತಿಯುತವಾಗಿದ್ದು ಅವುಗಳನ್ನು ನಂದಿಸುವುದು ಕಷ್ಟ ಎಂದು ಡಿಜಿಸಿಎ ಹೇಳಿದೆ.

ಪ್ರಯಾಣಿಕರು ಹೊತ್ತೊಯ್ಯುವ ಲಿಥಿಯಂ ಬ್ಯಾಟರಿಗಳಿಗೆ ಸಂಬಂಧಿಸಿದ ವಸ್ತುಗಳ ಬಗ್ಗೆ ಪರಿಶೀಲಿಸುವಂತೆ ವಿಮಾನಯಾನ ಸಂಸ್ಥೆಗಳಿಗೆ ಡಿಜಿಸಿಎ ನಿರ್ದೇಶನ ನೀಡಿದೆ. ಅತಿಯಾಗಿ ಬಿಸಿಯಾಗುವುದು, ಎಲೆಕ್ಟ್ರಾನಿಕ್ ಸಾಧನಗಳಿಂದ ಹೊಗೆ ಅಥವಾ ಎಚ್ಚರಿಕೆ ಚಿಹ್ನೆಗಳನ್ನು ಗುರುತಿಸಲು, ಸರಿಯಾದ ಅಗ್ನಿಶಾಮಕ ಸಾಧನಗಳನ್ನು ಬಳಸಲು ಮತ್ತು ಅಪಾಯಗಳು ಎದುರಾದ ಸಮಯದಲ್ಲಿ ಏನು ಮಾಡಬೇಕೆಂದು ಸಿಬ್ಬಂದಿಗೆ ಉತ್ತಮ ತರಬೇತಿ ನೀಡಬೇಕು ಎಂದು ಒತ್ತಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.