ADVERTISEMENT

ಪೈಲಟ್ ಲೈಸೆನ್ಸ್‌: ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಡಿಜಿಸಿಎ ಮಾರ್ಗಸೂಚಿ 

ಪಿಟಿಐ
Published 10 ಆಗಸ್ಟ್ 2022, 15:36 IST
Last Updated 10 ಆಗಸ್ಟ್ 2022, 15:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ಗಾಗಿ ಅರ್ಜಿ ಸಲ್ಲಿಸಿರುವ ತೃತೀಯ ಲಿಂಗಿ ಅಭ್ಯರ್ಥಿಗಳಿಗಾಗಿ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬುಧವಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಕೇರಳದ ತೃತೀಯ ಲಿಂಗಿ ಆ್ಯಡಂ ಹ್ಯಾರಿ ಎಂಬುವರಿಗೆ ಕಮರ್ಷಿಯಲ್‌ ಪೈಲಟ್‌ ಲೈಸೆನ್ಸ್‌ ನೀಡಲು ಡಿಜಿಸಿಎ ನಿರಾಕರಿಸಿದ್ದಾಗಿ ಹೋದ ತಿಂಗಳು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನು ಅಲ್ಲಗಳೆದಿದ್ದ ಡಿಜಿಸಿಎ ‘ಯಾವುದೇ ರೀತಿಯ ವೈದ್ಯಕೀಯ, ಮನೋವೈದ್ಯಕೀಯ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿಲ್ಲ ಎಂಬುದನ್ನು ದೃಢೀಕರಿಸುವ ವೈದ್ಯಕೀಯ ಪ್ರಮಾಣ ಪತ್ರ ಒದಗಿಸುವಂತೆ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಸೂಚಿಸಲಾಗಿತ್ತು’ ಎಂದು ಸ್ಪಷ್ಟಪಡಿಸಿತ್ತು.

‘ಹಿಂದಿನ ಐದು ವರ್ಷಗಳಲ್ಲಿ ಹಾರ್ಮೋನ್‌ ಥೆರಪಿ ಅಥವಾ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗೆ ಒಳಗಾಗಿರುವವರು ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಸಿದ್ದಲ್ಲಿ, ಅಂತಹವರನ್ನು ಮಾನಸಿಕ ಆರೋಗ್ಯ ಸ್ಥಿತಿ ಅರಿಯುವ ಸಲುವಾಗಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ’ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

‘ಹಾರ್ಮೋನ್‌ ಥೆರಪಿಗೆ ಒಳಪಟ್ಟವರು ಅದರ ಅವಧಿ, ತೆಗೆದುಕೊಂಡ ಔಷಧ, ಮಾಡಿಕೊಂಡಿರುವ ಬದಲಾವಣೆ ಹಾಗೂ ಹಾರ್ಮೋನ್‌ ವಿಶ್ಲೇಷಣೆಗೆ ಸಂಬಂಧಿಸಿದಂತೆ ಎಂಡೊಕ್ರಿನಾಲಜಿಸ್ಟ್‌ಗಳಿಂದ ಪಡೆದ ಸಮಗ್ರ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು’ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.