ADVERTISEMENT

ಬಾಲಿವುಡ್‌ನ ನಟ ಧರ್ಮೇಂದ್ರ ಆರೋಗ್ಯ ಸ್ಥಿರ: ಕುಟುಂಬ

ಪಿಟಿಐ
Published 11 ನವೆಂಬರ್ 2025, 14:29 IST
Last Updated 11 ನವೆಂಬರ್ 2025, 14:29 IST
ಧರ್ಮೇಂದ್ರ
ಧರ್ಮೇಂದ್ರ   

ಮುಂಬೈ: ಬಾಲಿವುಡ್‌ನ ಪ್ರಸಿದ್ಧ ನಟ ಧರ್ಮೇಂದ್ರ (89) ಅವರ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮಂಗಳವಾರ ಪ್ರತಿಕ್ರಿಯಿಸಿರುವ ಅವರ ಕುಟುಂಬದವರು, ‘ಮೇರು ನಟನ ಆರೋಗ್ಯದ ಕುರಿತು ಸುಳ್ಳು ಸುದ್ದಿ ಪ್ರಕಟಿಸುವುದನ್ನು ಮಾಧ್ಯಮಗಳು ನಿಲ್ಲಿಸಬೇಕು’ ಎಂದು ಆಗ್ರಹಿಸಿದ್ದಾರೆ.

ಮುಂಬೈನ ಬ್ರೀಚ್‌ ಕ್ಯಾಂಡಿ ಆಸ್ಪತ್ರೆಯಲ್ಲಿ ನಟ ದಾಖಲಾಗಿದ್ದು, ತೀವ್ರ ನಿಗಾದಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.

‘ಧರ್ಮೇಂದ್ರ ಅವರು ಮೃತಪಟ್ಟಿದ್ದಾರೆ’ ಎಂಬ ಸುದ್ದಿ ಮಂಗಳವಾರ ಬೆಳಿಗ್ಗೆ ಹರಿದಾಡಿತ್ತು. ಅದನ್ನು ನಿರಾಕರಿಸಿ ಧರ್ಮೇಂದ್ರ ಅವರ ಪುತ್ರಿ ಇಶಾ ಡಿಯೋಲ್‌ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. 

ADVERTISEMENT

‘ಮಾಧ್ಯಮವು ಅತಿಯಾಗಿ ಪ್ರಚಾರ ಮಾಡುತ್ತಿದೆ ಮತ್ತು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ನನ್ನ ತಂದೆ ಆರೋಗ್ಯ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ನಮ್ಮ ಕುಟುಂಬದ ಖಾಸಗೀತನವನ್ನು ಗೌರವಿಸಿ ಹಾಗೂ ಅಪ್ಪನ ತ್ವರಿತ ಚೇತರಿಕೆಗೆ ಪ್ರಾರ್ಥಿಸಿ’ ಎಂದು ಇಶಾ ಬರೆದಿದ್ದಾರೆ. 

ಧರ್ಮೇಂದ್ರ ಅವರ ಪತ್ನಿ, ನಟಿ, ರಾಜಕಾರಣಿ ಹೇಮಾ ಮಾಲಿನಿ ಅವರು ‘ಎಕ್ಸ್‌’ನಲ್ಲಿ ಮಾಧ್ಯಮದ ವರದಿಯನ್ನು ಟೀಕಿಸಿದ್ದು, ಬೇಜವಾಬ್ದಾರಿಯ ನಡೆ ಎಂದು ದೂರಿದ್ದಾರೆ.

‘ಹಿರಿಯ ನಟ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ. ಅವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾವೆಲ್ಲರೂ ಪ್ರಾರ್ಥಿಸೋಣ’ ಎಂದು ಧರ್ಮೇಂದ್ರ ಅವರ ಮಗ ಸನ್ನಿ ಡಿಯೋಲ್‌ ಪ್ರತಿಕ್ರಿಯಿಸಿದ್ದಾರೆ. 

ರಕ್ಷಣಾ ಸಚಿವ ರಾಜನಾಥ ಸಿಂಗ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌, ಗೀತರಚನೆಕಾರ ಜಾವೇದ್‌ ಅಖ್ತರ್‌ ಸೇರಿದಂತೆ ಹಲವರು ‘ಎಕ್ಸ್‌’ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿ ಪೋಸ್ಟ್‌ ಮಾಡಿದ್ದರು. ಇಶಾ ಡಿಯೋಲ್‌ ಅವರ ಹೇಳಿಕೆ ಬಂದ ನಂತರ, ಅವರು ತಮ್ಮ ಪೋಸ್ಟ್‌ಗಳನ್ನು ಅಳಿಸಿದ್ದಾರೆ.   

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.