
ಧುರಂಧರ್ ಸಿನಿಮಾ ದೃಶ್ಯ ಹಾಗೂ ಪಶ್ಚಿಮ ಬಂಗಾಳ ಸಿಎಂ ಮಮತಾ
ಬೆಂಗಳೂರು: ಸಾಲು–ಸಾಲು ಚಿತ್ರಗಳ ಸೋಲಿನಿಂದ ಕಂಗೆಟ್ಟಿದ್ದ ಬಾಲಿವುಡ್‌ಗೆ, ರಣವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿರುವ ಸ್ಪೈ ಥ್ರಿಲ್ಲರ್ ಸಿನಿಮಾ ಧುರಂಧರ್ ಸ್ವಲ್ಪ ಚೇತರಿಕೆ ನೀಡಿದೆ.
‘ಉರಿ’ ಸಿನಿಮಾ ನಿರ್ದೇಶಿಸಿದ್ದ ಆದಿತ್ಯ ಧರ್ ಅವರ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆಯ ನಡುವೆ ದೇಶದಲ್ಲಿ ಮತ್ತೆ ಭಾರತ್–ಪಾಕ್ ಪರ ವಿರೋಧಿ ಚರ್ಚೆಗಳಿಗೆ ಇಂಬು ಕೊಟ್ಟಿದೆ.
ಚಿತ್ರದಲ್ಲಿ ಭಾರತ ವಿರೋಧಿ ಪಾಕ್ ಭಯೋತ್ಪಾದಕರ ದುಷ್ಕೃತ್ಯಗಳನ್ನು ಬಗೆಬಗೆಯಾಗಿ ತೋರಿಸಲಾಗಿದೆ. ಇದರಲ್ಲಿ ಪಾಕ್ ಉಗ್ರರ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ಅವರ ಪಾತ್ರವಂತೂ ಭಾರಿ ಮೆಚ್ಚುಗೆಗೆ ಕಾರಣವಾಗಿದೆ.
ಇದೇ ದೃಶ್ಯವನ್ನು ಇಟ್ಟುಕೊಂಡು ಅನೇಕರು ಪಾಕ್ ಪರ ಮಾತನಾಡುವವರನ್ನು ಟ್ರೋಲ್ ಮಾಡುತ್ತಿದ್ದಾರೆ. ಅದೇ ರೀತಿ ಇತ್ತೀಚೆಗೆ ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿ ಕಟ್ಟುತ್ತೇನೆ ಎಂದು ಹೇಳಿಕೆ ನೀಡಿ ದೇಶದಾದ್ಯಂತ ಸಂಚಲನ ಸೃಷ್ಟಿ ಮಾಡಿದ್ದ ಟಿಎಂಸಿ ನಾಯಕ ಹುಮಾಯೂನ್ ಕಬೀರ್ ಅವರು ಬಿಜೆಪಿ ರಾಜಕೀಯ ವಾಕ್ಸಮರಕ್ಕೆ ಆಹಾರವಾಗಿದ್ದಾರೆ.
ಟಿಎಂಸಿ ಸರ್ಕಾರ ಹಾಗೂ ಅದರ ನಾಯಕರು ಇನ್ನೇನು ವಿಧಾನಸಭಾ ಚುನಾವಣೆ ಸಮೀಸುವ ಹೊತ್ತಿನಲ್ಲಿ ಕೋಮು ಧ್ರುವೀಕರಣ ಶುರು ಮಾಡಿದ್ದಾರೆ ಎಂದಿರುವ ಬಿಜೆಪಿ, ಧುರಾಂದರ್ ಸಿನಿಮಾದಲ್ಲಿನ ಟೆರರ್ ಲೀಡರ್ ಅಕ್ಷಯ್ ಖನ್ನಾ ಅವರ ದೃಶ್ಯವನ್ನು ಪಶ್ಚಿಮ ಬಂಗಾಳ ರಾಜಕೀಯಕ್ಕೆ ಎಳೆದು ತಂದಿದೆ.
ಈ ಕುರಿತು ಟ್ವೀಟ್ ಮಾಡಿರುವ ಪಶ್ಚಿಮ ಬಂಗಾಳ ಬಿಜೆಪಿ, ‘ನಿಮಗೆ ಧುರಾಂದರ್ ಸಿನಿಮಾದಲ್ಲಿನ ಪಾಕ್ ಕರಾಳ ಲೋಕದ ನಿಜ ದರ್ಶನ ಆಗಬೇಕಾದರೆ ಪಶ್ಚಿಮ ಬಂಗಾಳದ ಕೋಲ್ಕತ್ತದ ಮಿತೀಯಾ ಬುರ್ಜ್ ಪ್ರದೇಶಕ್ಕೆ ಬನ್ನಿ, ಈ ಪ್ರದೇಶವನ್ನು ಕೋಲ್ಕತ್ತದ ಮೇಯರ್ ಫರ್ಹಾದ್ ಹಕೀಂ ಅವರು ಮಿನಿ ಪಾಕಿಸ್ತಾನ ಎಂದಿರುವುದು ದರ್ಶನವಾಗುತ್ತದೆ’ ಎಂದು ಟಿಎಂಸಿಯ ಕಾಲೆಳೆದಿದೆ.
ಹುಮಾಯೂನ್ ಕಬೀರ್ ಹೇಳಿದ್ದೇನು?
ಇತ್ತೀಚೆಗೆ ಶಾಸಕ ಹುಮಾಯೂನ್ ಕಬೀರ್ ಅವರು ಬಾಬರಿ ಮಸೀದಿ ನಿರ್ಮಾಣ ಹೇಳಿಕೆ ನೀಡಿದ್ದರಿಂದ ಪಶ್ಚಿಮ ಬಂಗಾಳ ರಾಜಕಾರಣದಲ್ಲಿ ಸಂಚಲನ ಸೃಷ್ಟಿಯಾಗಿತ್ತು. ಆಡಳಿತ ಪಕ್ಷದ ಹುನ್ನಾರದಿಂದ ಕೋಮು ಧ್ರುವೀಕರಣದ ಪ್ರಯತ್ನಗಳು ನಡೆಯುತ್ತಿವೆ ಎಂದು ಬಿಜೆಪಿ ಆರೋಪ ಮಾಡಿತ್ತು.
ಇದೇ ಡಿ.6ರಂದು ಬಾಬರಿ ಮಸೀದಿ ನಿರ್ಮಾಣಕ್ಕೆ ಅಡಿಪಾಯ ಹಾಕುವುದಾಗಿ ಘೋಷಿಸಿದ್ದರು. ಅವರ ಈ ನಡೆಯಿಂದ ಪಕ್ಷಕ್ಕೆ ತೀವ್ರ ಮುಜುಗರ ಉಂಟಾಗಿತ್ತು. ಡ್ಯಾಮೇಜ್ ಕಂಟ್ರೋಲ್ ಮಾಡುವ ಪ್ರಯತ್ನದ ಭಾಗವಾಗಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ಈ ಹಿಂದೆ ಕಬೀರ್ ಅವರಿಗೆ ಎಚ್ಚರಿಕೆ ನೀಡಲಾಗಿತ್ತು ಆದರೂ ಅವರು ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಪಕ್ಷಕ್ಕೆ ಮುಜುಗರ ಉಂಟಾಗುವಂತೆ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದರು.
ಮೂಲಗಳ ಪ್ರಕಾರ, ಅವರು ಶುಕ್ರವಾರ ತೃಣಮೂಲ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ, ಹೊಸ ಪಕ್ಷ ಸ್ಥಾಪಿಸಿ, ಮಸೀದಿ ನಿರ್ಮಾಣವನ್ನು ಮುಂದುವರೆಸುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.