ADVERTISEMENT

ಅಹಮದಾಬಾದ್‌ನಲ್ಲಿ ಬಿಜೆಪಿ ಹಿರಿಯ ನಾಯಕರನ್ನು ಭೇಟಿಯಾದರೇ ಚಿರಾಗ್ ಪಾಸ್ವಾನ್?

ಪಿಟಿಐ
Published 29 ಜೂನ್ 2021, 3:13 IST
Last Updated 29 ಜೂನ್ 2021, 3:13 IST
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)
ಚಿರಾಗ್ ಪಾಸ್ವಾನ್ (ಪಿಟಿಐ ಚಿತ್ರ)   

ಅಹಮದಾಬಾದ್:ಬಿಹಾರದ ಲೋಕ ಜನಶಕ್ತಿ ಪಕ್ಷದ (ಎಲ್‌ಜೆಪಿ) ಆಂತರಿಕ ಬಿಕ್ಕಟ್ಟಿನ ನಡುವೆಯೇ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಅವರು ಅಹಮದಾಬಾದ್‌ಗೆ ಭೇಟಿ ನೀಡಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರನ್ನು ಭೇಟಿಯಾಗಲು ಅವರು ನಗರಕ್ಕೆ ಬಂದಿದ್ದಾರೆ ಎಂಬ ವದಂತಿ ಹಬ್ಬಿದೆ.

ಈ ಕುರಿತು ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರಿಸಿರುವ ಅವರು, ಇದೊಂದು ಖಾಸಗಿ ಭೇಟಿ ಎಂದಿದ್ದಾರೆ.

ಕೇಂದ್ರದ ಮಾಜಿ ಸಚಿವ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರನಾಗಿರುವ ಚಿರಾಗ್‌ರನ್ನು ಅವರ ಚಿಕ್ಕಪ್ಪ ಮತ್ತು ಹಾಜಿಪುರದ ಸಂಸದ ಪಶುಪತಿ ಕುಮಾರ್ ಪರಾಸ್ ಅವರ ಬಣ ಪಕ್ಷದ ಮುಖ್ಯಸ್ಥನ ಸ್ಥಾನದಿಂದ ವಜಾಗೊಳಿಸಿತ್ತು. ಇದಕ್ಕೆ ಪ್ರತಿಯಾಗಿ ಕ್ರಮ ಕೈಗೊಂಡಿದ್ದ ಚಿರಾಗ್, ಎಲ್‌ಜೆಪಿಯ ಬಿಹಾರ ಘಟಕಕ್ಕೆ ನೂತನ ಅಧ್ಯಕ್ಷರನ್ನು ನೇಮಕ ಮಾಡಿದ್ದರು.

ಆರು ಮಂದಿ ಸಂಸದರನ್ನು ಹೊಂದಿರುವ ಪಕ್ಷದ ಐವರು ಸಂಸದರು ಇತ್ತೀಚೆಗೆ ಚಿರಾಗ್ ನಾಯಕತ್ವದ ವಿರುದ್ಧ ಬಂಡಾಯವೆದ್ದು ಅವರನ್ನು ಸಂಸದೀಯ ಪಕ್ಷದ ನಾಯಕದ ಸ್ಥಾನದಿಂದ ತೆರವುಗೊಳಿಸಿದ್ದರು.

ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಬಿಜೆಪಿ ತಮ್ಮ ನೆರವಿಗೆ ಬಾರದಿರುವುದು ನೋವುಂಟು ಮಾಡಿದೆ ಎಂದೂ ಚಿರಾಗ್ ಇತ್ತೀಚೆಗೆ ಹೇಳಿದ್ದರು.

ರಾಮ್ ವಿಲಾಸ್ ಪಾಸ್ವಾನ್ ಅವರ ಜನ್ಮದಿನದ ಸಂದರ್ಭ, ಜುಲೈ 5ರಿಂದ ಹಾಜಿಪುರದಿಂದ ‘ಆಶೀರ್ವಾದ ಯಾತ್ರೆ’ ನಡೆಸುವುದಾಗಿ ಇತ್ತೀಚೆಗೆ ಚಿರಾಗ್ ಘೋಷಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.