ADVERTISEMENT

ಮತ ಹಾಕುವಂತೆ ಮುಸ್ಲಿಮರಿಗೆ ಮಮತಾ ಬ್ಯಾನರ್ಜಿ ಮನವಿ: ಪ್ರಧಾನಿ ಮೋದಿ ಟೀಕೆ

‘ದೀದಿಗೆ ಅಲ್ಪಸಂಖ್ಯಾತರ ಮತ ಕೈತಪ್ಪುವ ಭೀತಿ’

ಪಿಟಿಐ
Published 6 ಏಪ್ರಿಲ್ 2021, 20:08 IST
Last Updated 6 ಏಪ್ರಿಲ್ 2021, 20:08 IST
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಉತ್ಸಾಹ–ಪಿಟಿಐ ಚಿತ್ರ
ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದ ಕಾರ್ಯಕರ್ತರ ಉತ್ಸಾಹ–ಪಿಟಿಐ ಚಿತ್ರ   

ಕೂಚ್‌ಬಿಹಾರ್: ‘ಮುಸ್ಲಿಮರೆಲ್ಲರೂ ಒಗ್ಗಟ್ಟಾಗಿ ಟಿಎಂಸಿಗೆ ಮತ ಹಾಕಬೇಕು ಎಂದು ಮಮತಾ ಬ್ಯಾನರ್ಜಿ ಅವರು ಮನವಿ ಮಾಡುತ್ತಿರುವುದನ್ನು ನೋಡಿದರೆ, ಅವರಿಗೆ ಅಲ್ಪಸಂಖ್ಯಾತರ ಮತಗಳು ಕೈತಪ್ಪುವ ಅತಂಕ ಎದುರಾಗಿರುವುದು ಸ್ಪಷ್ಟವಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ.

‘ಇದೇ ರೀತಿ, ‘ಎಲ್ಲಾ ಹಿಂದೂಗಳು ಒಂದಾಗಬೇಕು’ ಎಂದು ನಾವು ಹೇಳಿದ್ದಿದ್ದರೆ ಎಲ್ಲರೂ ನಮ್ಮನ್ನು
ಟೀಕಿಸುತ್ತಿದ್ದರು. ನಾವು ಖಂಡನೆಗೆ ಒಳಗಾಗುತ್ತಿದ್ದೆವು, ಚುನಾವಣಾ ಆಯೋಗವು ನಮಗೆ ನೋಟಿಸ್ ಕಳುಹಿಸುತ್ತಿತ್ತು’ ಎಂದು ಪ್ರಧಾನಿ ಹೇಳಿದ್ದಾರೆ.

‘ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಪರ ಅಲೆ ನಿಚ್ಚಳವಾಗಿದ್ದು, ಪಕ್ಷವು ಸರ್ಕಾರ ರಚನೆ ಮಾಡಲಿದೆ. ತಿಲಕ ಇಡುವ ಮತ್ತು ಕೇಸರಿ ಧರಿಸುವ ಜನರೆಂದರೆ ಮಮತಾ ಅವರಿಗೆ ಏನೋ ಸಮಸ್ಯೆ, ಅವರ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ಅವರು ಸೋಲೊಪ್ಪಿಕೊಂಡಂತೆ ತೋರುತ್ತಿದೆ’ ಎಂದು ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ಹೇಳಿದ್ದಾರೆ.

ADVERTISEMENT

‘ಮುಸ್ಲಿಮರು ಒಗ್ಗೂಡಿ ತಮ್ಮ ಪಕ್ಷ ಟಿಎಂಸಿಗೆ ಮತ ಚಲಾಯಿಸುವಂತೆ ಮನವಿ ಮಾಡುವ ಮೂಲಕ ಮಮತಾ ಅವರು ಜನಪ್ರತಿನಿಧಿ ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಆರೋಪಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ಸೋಮವಾರ ದೂರು ನೀಡಿದೆ.

‘ಯಾರು ಸೋಲುತ್ತಾರೆ ಮತ್ತು ಯಾರು ಗೆಲ್ಲುತ್ತಾರೆ ಎಂದು ತಿಳಿಯಲು ದೇವರಿಗೆ ತೊಂದರೆ ಕೊಡಬೇಕಿಲ್ಲ. ದೇವರ ರೂಪದಲ್ಲಿರುವ ‘ಜನತಾ ಜನಾರ್ದನ’ (ಜನಸಾಮಾನ್ಯ) ಪ್ರತಿಕ್ರಿಯೆ ನೀಡಿದ್ದಾನೆ. ಗಾಳಿಯು ಬಿಜೆಪಿ ಪರವಾಗಿ ಬೀಸುತ್ತಿದೆ ಎಂದು ತಿಳಿಯಲು ಅತಿಮಾನುಷ ಶಕ್ತಿಯ ಅಗತ್ಯವಿಲ್ಲ’ ಎಂದು ಮೋದಿ ಹೇಳಿದರು.

‘ಬಿಜೆಪಿ ಗೆಲ್ಲಲಿದೆ ಎಂದು ಹೇಳಲು ಪ್ರಧಾನಿ ದೇವರೇ ಅಥವಾ ಅತಿಮಾನುಷ ಶಕ್ತಿಯೇ’ ಎಂದು ಮಮತಾ ಅವರು ಇತ್ತೀಚೆಗೆ ಪ್ರಶ್ನಿಸಿದ್ದಕ್ಕೆ ಮೋದಿ ಈ ಪ್ರತಿಕ್ರಿಯೆ ನೀಡಿದ್ದಾರೆ.

‘ಬಿಜೆಪಿ ಕಾರ್ಯಕರ್ತರಿಂದ ದೌರ್ಜನ್ಯ’
ಕಾಲಚೀನಿ (ಪಶ್ಚಿಮ ಬಂಗಾಳ) (ಪಿಟಿಐ):
‘ಬಿಜೆಪಿ ಕಾರ್ಯಕರ್ತರು ಮತಗಟ್ಟೆಗಳನ್ನು ಒತ್ತಾಯಪೂರ್ವಕವಾಗಿ ಅತಿಕ್ರಮಣ ಮಾಡಿಕೊಂಡು, ಟಿಎಂಸಿ ಸದಸ್ಯರು ಮತ್ತು ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ.

ಬಿಜೆಪಿಯ ಇಂತಹ ಬೆದರಿಕೆ ತಂತ್ರಗಳಿಂದ ನಾನು ವಿಚಲಿತಳಾಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಅಲಿಪುರ್‌ದೌರ್ ಜಿಲ್ಲೆಯಲ್ಲಿ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಅವರು, ‘ಟಿಎಂಸಿ ಅಭ್ಯರ್ಥಿ ಸುಜಾತಾ ಮಂಡ‌ಲ್ ಅವರನ್ನು ಬಿಜೆಪಿ ಕಾರ್ಯಕರ್ತರು ಮತಗಟ್ಟೆ ಬಳಿ ಅಟ್ಟಿಸಿಕೊಂಡು ಹೋಗಿ ತಲೆಗೆ ಹೊಡೆದಿದ್ದಾರೆ ಎಂದು ಆರೋಪಿಸಿದರು.

‘ನಮ್ಮ ಪಕ್ಷದ ಪರಿಶಿಷ್ಟ ಜಾತಿ ಅಭ್ಯರ್ಥಿ ಸುಜಾತಾ ಅವರು ಮತಗಟ್ಟೆಗೆ ಭೇಟಿ ನೀಡಿದಾಗಬಿಜೆಪಿ ಸದಸ್ಯರು ಗಂಭೀರ ಗಾಯ ಮಾಡಿದ್ದಾರೆ. ಖಾನಕುಲ್‌ನಲ್ಲಿ ಪಕ್ಷದ ಮತ್ತೊಬ್ಬ ಅಭ್ಯರ್ಥಿಯನ್ನೂ ಹೊಡೆದಿದ್ದಾರೆ. ನಮ್ಮ ಅಭ್ಯರ್ಥಿ ಶೌಕತ್ ಮೊಲ್ಲಾ ಅವರನ್ನು ಮತಗಟ್ಟೆಗೆ ಪ್ರವೇಶಿಸದಂತೆ ಭದ್ರತಾ ಪಡೆಗಳು ತಡೆದಿವೆ. ಇಂತಹ ಹಲವಾರು ನಿದರ್ಶನಗಳು ಇವೆ. ರಾಜ್ಯದಾದ್ಯಂತ ನಮ್ಮ ಅಭ್ಯರ್ಥಿಗಳು ಹಾಗೂ ಪಕ್ಷದ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದಿವೆ ಎಂದು ಬ್ಯಾನರ್ಜಿ ಹೇಳಿದ್ದಾರೆ.

‘ಹಿಂಸಾಚಾರದ ಕುರಿತಂತೆ ಬೆಳಿಗ್ಗೆಯಿಂದ ತಮಗೆ ಕನಿಷ್ಠ 100 ದೂರುಗಳು ಬಂದಿವೆ. ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬಿಜೆಪಿ ಹಮ್ಮಿಕೊಂಡ ಸಮಾವೇಶದಲ್ಲಿ ಜನರು ಅಷ್ಟಾಗಿ ಸೇರದ ಕಾರಣ, ಪಕ್ಷದ ನಾಯಕತ್ವವು ದೊಡ್ಡ ಷಡ್ಯಂತ್ರ ಹೆಣೆದಿದೆ. ಮತಗಟ್ಟೆ ವಶಪಡಿಸಿಕೊಳ್ಳಲು ಬಂದಾಗ ತಡೆಯಬೇಡಿ ಎಂದು ಭದ್ರತಾಪಡೆಗಳಿಗೆ ಸೂಚನೆ ರವಾನಿಸಿದೆ’ ಎಂದು ಅವರು ಆರೋಪಿಸಿದರು.

‘ಚುನಾವಣೆ ಪ್ರಾರಂಭವಾದಾಗಿನಿಂದ ನಮ್ಮ ನಾಲ್ವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ನಿಮ್ಮ (ಬಿಜೆಪಿ) ಇಂತಹ ಬೆದರಿಕೆ ಕ್ರಮಗಳಿಂದ ನಮ್ಮನ್ನು ಅಧೀರರನ್ನಾಗಿಸಲು ಸಾಧ್ಯವಿಲ್ಲ’ ಎಂದು ಮಮತಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.