ADVERTISEMENT

ನಿವೃತ್ತ ಬ್ಯಾಂಕರ್‌ಗೆ ಒಂದು ತಿಂಗಳ ಡಿಜಿಟಲ್‌ ಅರೆಸ್ಟ್‌: ‌‌‌₹23 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 15:48 IST
Last Updated 22 ಸೆಪ್ಟೆಂಬರ್ 2025, 15:48 IST
<div class="paragraphs"><p>ಡಿಜಿಟಲ್‌ ಅರೆಸ್ಟ್‌</p></div>

ಡಿಜಿಟಲ್‌ ಅರೆಸ್ಟ್‌

   

ನವದೆಹಲಿ: ದೆಹಲಿಯ ಮಾಜಿ ಬ್ಯಾಂಕರ್‌ ಒಬ್ಬರನ್ನು ‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ಒಂದು ತಿಂಗಳ ಕಾಲ ಡಿಜಿಟಲ್‌ ಕಣ್ಗಾವಲಿನಲ್ಲಿ ಇರಿಸಿಕೊಂಡಿದ್ದ ಸೈಬರ್‌ ವಂಚಕರು ₹ 23 ಕೋಟಿ ದೋಚಿದ್ದಾರೆ.

‘ಮಾದಕವಸ್ತು ಕಳ್ಳಸಾಗಣೆ, ಭಯೋತ್ಪಾದಕರಿಗೆ ಧನಸಹಾಯ ಹಾಗೂ ಪುಲ್ವಾಮಾ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾದವರಿಂದ ನಿಮ್ಮ ಆಧಾರ್‌ ಕಾರ್ಡ್‌ ಬಳಕೆಯಾಗಿದೆ’ ಎಂದು ಸೈಬರ್‌ ಆರೋಪಿಯು ನಿವೃತ್ತ ಅಧಿಕಾರಿಗೆ ತಿಳಿಸಿ, ತನಿಖೆಗೊಳಪಡಿಸಿದ್ದಾನೆ.

ADVERTISEMENT

ತನಿಖೆಯ ಹೆಸರಿನಲ್ಲಿ ಒಂದು ತಿಂಗಳು ‘ಡಿಜಿಟಲ್‌ ಅರೆಸ್ಟ್‌’ ಹೆಸರಿನಲ್ಲಿ ಗೃಹಬಂಧನದಲ್ಲಿಟ್ಟು, ಹಂತ ಹಂತವಾಗಿ ಅವರ ಖಾತೆಗಳಿಂದ ತನ್ನ ಬೇರೆ ಬೇರೆ ಖಾತೆಗೆ ಬೃಹತ್ ಮೊತ್ತವನ್ನು ವಂಚಕನು ವರ್ಗಾಯಿಸಿಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಮುಂಬೈನ ಪೊಲೀಸ್‌ ಅಧಿಕಾರಿ ಎಂದು ಆಗಸ್ಟ್‌ 4ರಂದು ಕರೆ ಮಾಡಿದ್ದ ಸೈಬರ್‌ ವಂಚಕನು, ಮಾದಕವಸ್ತು ಕಳ್ಳಸಾಗಣೆ ದಂಧೆ ಹೆಸರಿನಲ್ಲಿ ನಿವೃತ್ತ ಅಧಿಕಾರಿಯನ್ನು ಹೆದರಿಸಿದ್ದ. ನಂತರ ಜಾರಿ ನಿರ್ದೇಶನಾಲಯ (ಇ.ಡಿ) ಹಾಗೂ ಸಿಬಿಐ ಅಧಿಕಾರಿಗಳ ಸೋಗಿನಲ್ಲಿ ವಂಚಕರು ಬ್ಯಾಂಕ್‌ರ್‌ನನ್ನು ಸಂಪರ್ಕಿಸಿದ್ದಾರೆ. ಈ ವಿಷಯ ಬಹಿರಂಗವಾದರೆ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸೆ. 4ರವರೆಗೂ ಕಿರುಕುಳ ನೀಡಿದ್ದಾರೆ. ಹಂತ ಹಂತವಾಗಿ ವಿವಿಧ ಖಾತೆಗಳಿಗೆ ಹಣ ಹಾಕಿಸಿಕೊಂಡಿದ್ದಾರೆ.

ವಂಚನೆಗೆ ಒಳಗಾಗಿರುವುದು ಅರಿವಾಗುತ್ತಿದ್ದಂತೆ, ಸೆ.19ರಂದು ನಿವೃತ್ತ ಬ್ಯಾಂಕರ್‌ ಎನ್‌ಸಿಆರ್‌ಪಿ ಪೋರ್ಟಲ್‌ನಲ್ಲಿ ದೂರು ದಾಖಲಿಸಿದರು.

ಎಫ್‌ಐಆರ್‌ ದಾಖಲಿಸಿಕೊಂಡ ಐಎಫ್‌ಎಸ್‌ಒ ಘಟಕವು, ವಂಚಕರ ವಿವಿಧ ಬ್ಯಾಂಕ್‌ ಖಾತೆಗಳಲ್ಲಿದ್ದ ₹12.11 ಕೋಟಿ ರೂಪಾಯಿಗಳನ್ನು ಸ್ಥಗಿತಗೊಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಯ ಜಾಡು ತಪ್ಪಿಸಲಿಕ್ಕಾಗಿಯೇ ವಂಚಕರು ದೇಶದ ವಿವಿಧ ಭಾಗಗಳಲ್ಲಿ ಹಣವನ್ನು ನಗದೀಕರಿಸಿಕೊಂಡಿದ್ದಾರೆ. ಹಲವು ತಂಡಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.