ADVERTISEMENT

ಜೀವನ ಕ್ರಮವಾದ ಡಿಜಿಟಲ್‌ ಇಂಡಿಯಾ: ನರೇಂದ್ರ ಮೋದಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2020, 20:30 IST
Last Updated 19 ನವೆಂಬರ್ 2020, 20:30 IST
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ   

ಬೆಂಗಳೂರು: ‘ಡಿಜಿಟಲ್‌ ಇಂಡಿಯಾ’ ತಂತ್ರಜ್ಞಾನ ಈಗ ದೇಶದ ಜೀವನವಿಧಾನವಾಗಿ ಮಾರ್ಪಟ್ಟಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

23 ನೇ ‘ಬೆಂಗಳೂರು ತಂತ್ರಜ್ಞಾನ ಶೃಂಗ’ವನ್ನು ಗುರುವಾರ ವರ್ಚುವಲ್‌ ಮೂಲಕ ಉದ್ಘಾಟಿಸಿದ ಅವರು, ‘ಐದು
ವರ್ಷಗಳ ಹಿಂದೆ ಡಿಜಿಟಲ್‌ ಇಂಡಿಯಾವನ್ನು ಆರಂಭಿಸಲಾಯಿತು. ‘ಡಿಜಿಟಲ್‌ ತಂತ್ರಜ್ಞಾನ’ ಬಡವರು, ನಿರ್ಲಕ್ಷಿತ ವರ್ಗದ ಜೀವನದಲ್ಲಿ ಹೊಸ ಪರಿವರ್ತನೆ ತಂದಿದೆ. ‘ಭೀಮ್‌’ ಪಾವತಿ ಆ್ಯಪ್‌ ಅದಕ್ಕೊಂದು ನಿದರ್ಶನ’ ಎಂದರು.

ಡಿಜಿಟಲ್‌ ಇಂಡಿಯಾ ಹೆಚ್ಚು ಮಾನವೀಯ ಕೇಂದ್ರಿತ ಯೋಜನೆ. ಮಾನವನ ಘನತೆಯನ್ನು ಹೆಚ್ಚಿಸಲು ಇದರಿಂದ ಸಾಧ್ಯವಾಗಿದೆ. ಇದು ಜನರ ಜೀವನವನ್ನು ಆಮೂಲಾಗ್ರ ಬದಲಾವಣೆ ಮಾಡಿದ್ದೂ ಅಲ್ಲದೆ, ಸರ್ಕಾರದ ಯೋಜನೆಗಳ ಪ್ರಯೋಜನ ನೇರವಾಗಿ ಫಲಾನುಭವಿಗಳಿಗೆ ತಲುಪಿಸುವಲ್ಲಿ ಸಹಕಾರಿಯಾಗಿದೆ. ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ದೇಶದ ಲಕ್ಷಾಂತರ ರೈತರ ಖಾತೆಗಳಿಗೆ ಒಂದೇ ಒಂದು ಕ್ಲಿಕ್‌ ಮೂಲಕ ಹಣವನ್ನು ನೇರವಾಗಿ ವರ್ಗಾವಣೆ ಮಾಡಲಾಯಿತು ಎಂದರು.

ADVERTISEMENT

ದೇಶಕ್ಕೆ ಇಂಟರ್‌ನೆಟ್‌ ಕಾಲಿಟ್ಟಿದ್ದು 25 ವರ್ಷಗಳ ಹಿಂದೆ. ಇಂದು 75 ಕೋಟಿಇಂಟರ್‌ನೆಟ್‌ ಸಂಪರ್ಕ ದೇಶದಲ್ಲಿದೆ. ಇದರಲ್ಲಿ ಅರ್ಧದಷ್ಟು ಸಂಪರ್ಕಗಳು ಕಳೆದ ನಾಲ್ಕು ವರ್ಷಗಳಲ್ಲಿ ಸೇರ್ಪಡೆ ಆಗಿದ್ದು ಎಂದು ಮೋದಿ ತಿಳಿಸಿದರು.

‘ನಾವೀಗ ಮಾಹಿತಿ ಯುಗದ ಮಧ್ಯ ಭಾಗದಲ್ಲಿದ್ದೇವೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮೊದಲ ನಡೆಯನ್ನು ನಡೆಸುವವರಿಗಿಂತ, ಉತ್ತಮ ಮತ್ತು ದೃಢವಾದ ಹೆಜ್ಜೆಯನ್ನು ಇಡುವವರೇ ಪ್ರಸ್ತುತವೆನಿಸುತ್ತಾರೆ. ಭಾರತವೀಗ ಮುಂದಿನ ಜಿಗಿತಕ್ಕಾಗಿ ಅದ್ವಿತೀಯ ಸ್ಥಾನದಲ್ಲಿ ನೆಲೆ ನಿಂತಿದೆ. ನಮ್ಮಲ್ಲಿ ಅತ್ಯುತ್ತಮ ಬುದ್ಧಿಮತ್ತೆಯ ಜನರೂ ಇದ್ದಾರೆ,
ದೊಡ್ಡ ಮಾರುಕಟ್ಟೆಯನ್ನೂ ಹೊಂದಿದ್ದೇವೆ. ನಮ್ಮ ಸ್ಥಳೀಯ ತಂತ್ರಜ್ಞಾನ ಪರಿಹಾರಗಳು ಜಾಗತಿಕ ಮಟ್ಟಕ್ಕೂ ಸಲ್ಲುವ ಸಾಮರ್ಥ್ಯವನ್ನು ಪಡೆದಿವೆ. ಆದ್ದರಿಂದ, ದೇಶದಲ್ಲಿ ಅಭಿವೃದ್ಧಿಪಡಿಸುವ ತಂತ್ರಜ್ಞಾನ ಪರಿಹಾರಗಳು ಜಾಗತಿಕ ಮಟ್ಟದಲ್ಲೂ ಅನ್ವಯವಾಗುವಂತಿರಬೇಕು’ ಎಂದು ಮೋದಿ ಹೇಳಿದರು.

ರಕ್ಷಣಾ ಕ್ಷೇತ್ರದಲ್ಲೂ ತಂತ್ರಜ್ಞಾನ: ಹಿಂದೆ ಯುದ್ಧಗಳಿಗೆ ಆನೆ– ಕುದುರೆಗಳನ್ನು ಬಳಸಲಾಗುತ್ತಿತ್ತು. ನಂತರ ಆ ಸ್ಥಾನವನ್ನು ಮದ್ದುಗುಂಡುಗಳು ತುಂಬಿದವು. ಈಗ ರಕ್ಷಣಾ ಕ್ಷೇತ್ರದಲ್ಲಿ ತಂತ್ರಜ್ಞಾನ ಅತ್ಯುನ್ನತ ಸ್ಥಾನ ಪಡೆದಿದೆ. ಯುಎವಿ, ಡ್ರೋನ್‌ ಮಹತ್ವದ ಸ್ಥಾನವನ್ನು ಪಡೆದಿವೆ. ಈ ಕ್ಷೇತ್ರದಲ್ಲಿ ಭಾರತೀಯ ಯುವ ಜನರು ಹೆಚ್ಚಿನ ಆವಿಷ್ಕಾರಗಳನ್ನು ನಡೆಸಬೇಕು ಎಂದು ಅವರು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌, ಶಿವಾಜಿನಗರ ಕ್ಷೇತ್ರದ ಶಾಸಕ ರಿಜ್ವಾನ್‌ ಆರ್ಷದ್‌ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.