ADVERTISEMENT

ದಿಗ್ವಿಜಯ್ ಸಿಂಗ್ ವಿರುದ್ಧ ಬಿಜೆಪಿ ಕೆಂಡ

ಕಾಶ್ಮೀರ ವಿಶೇಷಾಧಿಕಾರ ರದ್ದತಿ ಮರುಪರಿಶೀಲನೆ ಪ್ರಸ್ತಾಪಕ್ಕೆ ಭಾರಿ ವಿರೋಧ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 20:16 IST
Last Updated 12 ಜೂನ್ 2021, 20:16 IST
ದಿಗ್ವಿಜಯ್ ಸಿಂಗ್
ದಿಗ್ವಿಜಯ್ ಸಿಂಗ್   

ನವದೆಹಲಿ: ‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದು ಮಾಡಿದ್ದರ ಬಗ್ಗೆ ಮರುಚಿಂತನೆ ನಡೆಸಬಹುದು’ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಹೇಳಿದ್ದು, ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

‘ದಿಗ್ವಿಜಯ್ ಸಿಂಗ್ ಅವರು ಪಾಕಿಸ್ತಾನದ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.

ರಾಜ್ಯಸಭಾ ಸದಸ್ಯರೂ ಆಗಿರುವ ದಿಗ್ವಿಜಯ್, ಸಾಮಾಜಿಕ ಜಾಲತಾಣದ ಧ್ವನಿ ಸಂವಾದದಲ್ಲಿ (ಆಡಿಯೊ ಚಾಟ್‌) ಪಾಕಿಸ್ತಾನದ ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಈ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿವಾದಿಂದ ತಪ್ಪಿಸಿಕೊಳ್ಳಲು ಕಾಂಗ್ರೆಸ್ ಯತ್ನಿಸಿದೆ.

ADVERTISEMENT

‘ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿಯನ್ನು ತೆಗೆದುಹಾಕುವ ನಿರ್ಧಾರ ಅತ್ಯಂತ ದುಃಖಕರವಾದುದು. ಕಾಂಗ್ರೆಸ್ ಪಕ್ಷವು ಖಂಡಿತವಾಗಿಯೂ ಈ ವಿಷಯದ ಬಗ್ಗೆ ಮರುಚಿಂತನೆ ಮಾಡುತ್ತಿತ್ತು’ ಎಂದು ಸಿಂಗ್ ಹೇಳಿದ್ದರು.

ಸಿಂಗ್ ಹೇಳಿಕೆ ವಿರುದ್ಧ ಬಿಜೆಪಿಯ ಹಲವು ನಾಯಕರು ಮುಗಿಬಿದ್ದಿದ್ದಾರೆ. ಕಾಂಗ್ರೆಸ್ ಪಕ್ಷವು ಗಡಿಯಲ್ಲಿ ಭಾವನೆಗಳ ಜತೆ ಆಟ ಆಡುವುದನ್ನು ಬಿಡಬೇಕು ಎಂದು ಆಗ್ರಹಿಸಿದ್ದಾರೆ.

‘ಪಾಕಿಸ್ತಾನಬಯಸುವುದೂ ಇದನ್ನೇ’ ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.

ದಿಗ್ವಿಜಯ್ ಹೇಳಿಕೆಯನ್ನು ಜಮ್ಮು–ಕಾಶ್ಮೀರ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಸ್ವಾಗತಿಸಿದ್ದಾರೆ. 370ನೇ ವಿಧಿ ಮರುಸ್ಥಾಪನೆ ಮತ್ತು ಜಮ್ಮು–ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸುವ ಬಗ್ಗೆ ಮೋದಿ ಸರ್ಕಾರ ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಕೇಂದ್ರ ಸಚಿವರಾದ ಗಿರಿರಾಜ್ ಸಿಂಗ್ ಮತ್ತು ಕಿರಣ್ ರಿಜಿಜು ಅವರೂ ದಿಗ್ವಿಜಯ್ ಹೇಳಿಕೆಯನ್ನು ಖಂಡಿಸಿದ್ದಾರೆ.

‘ಕಾಂಗ್ರೆಸ್‌ನ ಮೊದಲ ಪ್ರೀತಿ ಇರುವುದು ಪಾಕಿಸ್ತಾನದ ಮೇಲೆ. ರಾಹುಲ್ ಗಾಂಧಿ ಅವರ ಸಂದೇಶವನ್ನು ದಿಗ್ವಿಜಯ್ ಅವರು ಪಾಕಿಸ್ತಾನಕ್ಕೆ ತಲುಪಿಸಿದ್ದಾರೆ. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಪಾಕಿಸ್ತಾನಕ್ಕೆ ಕಂಗ್ರೆಸ್ ನೆರವು ನೀಡಲಿದೆ’ಎಂದು ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ.

370ನೇ ವಿಧಿಯನ್ನು ರದ್ದುಗೊಳಿಸುವ ‘ಏಕಪಕ್ಷೀಯ’ ನಿರ್ಧಾರದ ವಿರುದ್ಧ ಸಿಡಬ್ಲ್ಯುಸಿ ವಾಗ್ದಾಳಿ ನಡೆಸಿತ್ತು. ಎಲ್ಲಾ ವರ್ಗದ ಜನರೊಂದಿಗೆ ಸಮಾಲೋಚಿಸಿದ ನಂತರ ಮತ್ತು ಭಾರತದ ಸಂವಿಧಾನಕ್ಕೆ ಅನುಗುಣವಾಗಿ ಕಟ್ಟುನಿಟ್ಟಾಗಿ ತಿದ್ದುಪಡಿ ಮಾಡುವವರೆಗೆ ಸರ್ಕಾರದ ನಿರ್ಧಾರವನ್ನು ಒಪ್ಪಲಾಗದು ಎಂದು ಪ್ರತಿಪಾದಿಸಿತ್ತು.

ದಿಗ್ವಿಜಯ್ ಸಿಂಗ್‌ ಹೇಳಿಕೆ; ಸ್ವಷ್ಪನೆಗೆ ಜೋಶಿ ಆಗ್ರಹ

ಹುಬ್ಬಳ್ಳಿ: ‘ಕಾಂಗ್ರೆಸ್ ಅಧಿಕಾರಕ್ಕೆ ಜಮ್ಮು–ಕಾಶ್ಮೀರದಲ್ಲಿ ಮತ್ತೆ 370ನೇ ವಿಧಿ ಜಾರಿಗೊಳಿಸಲಾಗುವುದು ಎಂದು ‌ಆ ಪಕ್ಷ ಮುಖಂಡ ದಿಗ್ವಿಜಯ್‌ ಸಿಂಗ್‌ ಹೇಳಿಕೆ ವೈಯಕ್ತಿಕವಾದದ್ದೊ; ಪಕ್ಷದ ನಿಲುವೊ’ ಎಂಬುದನ್ನು ಸೋನಿಯಾ ಗಾಂಧಿ ಹಾಗೂ ರಾಹುಲ್‌ ಗಾಂಧಿ ಸ್ಪಷ್ಟಪಡಿಸಬೇಕು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಕಾಂಗ್ರೆಸ್‌ ತುಷ್ಟೀಕರಣ ರಾಜಕಾರಣಕ್ಕೆ ಮೊದಲಿನಿಂದಲೂ ಪ್ರಸಿದ್ಧಿಯಾಗಿದೆ. ದೇಶದ ಈಗಿನ ಎಲ್ಲ ಸಮಸ್ಯೆಗಳಿಗೆ ಆ ಪಕ್ಷವೇ ಮೂಲ ಕಾರಣ. ಕಾಂಗ್ರೆಸ್‌ ಎಲ್ಲರಲ್ಲಿಯೂ ಭಾರತೀಯರು ಎನ್ನುವ ಭಾವನೆ ಮೂಡಿಸಲಿಲ್ಲ’ ಎಂದು ಟೀಕಿಸಿದರು.

ಇಂಧನ ಬೆಲೆ ನಿರಂತರ ಏರಿಕೆಯಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಹಿಂದೆ ಆಡಳಿತ ನಡೆಸಿದ ಪಕ್ಷದ ಅವೈಜ್ಞಾನಿಕ ನೀತಿಯಿಂದ ಈಗ ಈ ಪರಿಸ್ಥಿತಿ ತಲೆದೋರಿದೆ’ ಎಂದರು.

ಅರ್ಥ ಅರಿಯದ ಅಶಿಕ್ಷಿತರು: ಸಿಂಗ್‌

ಬಿಜೆಪಿಯ ನಾಯಕರ ಟೀಕೆಗಳಿಗೆ ಸರಣಿ ಟ್ವೀಟ್‌ ಮೂಲಕ ಪ್ರತಿಕ್ರಿಯೆ ನೀಡಿರುವ ದಿಗ್ವಿಜಯ್ ಸಿಂಗ್‌, ‘ಅಶಿಕ್ಷಿತ ಜನರಿಗೆ ಬಹುಶಃ ‘ಷಲ್‌’ ಮತ್ತು ‘ಕನ್ಸಿಡರ್‌’ ಪದಗಳ ಅರ್ಥವ್ಯತ್ಯಾಸವೇನೆಂಬುದು ತಿಳಿದಿಲ್ಲ’ ಎಂದಿದ್ದಾರೆ.

ಕಾಂಗ್ರೆಸ್‌ನ ಲಕ್ಷಾಂತರ ಕಾರ್ಯಕರ್ತರು, ಪಕ್ಷದ ಜತೆಗೆ ಸಹಾನುಭೂತಿ ಉಳ್ಳವರು ಹಾಗೂ ಬಿಜೆಪಿಯ ಮೋದಿ–ಶಾ ವಿನಾಶಕಾರಿ ಆಳ್ವಿಕೆಯನ್ನು ವಿರೋಧಿಸುವವರು ಈ ಸರ್ಕಾರವನ್ನು ಉರುಳಿಸಲು ಸರ್ವ ಪ್ರಯತ್ನಗಳನ್ನು ನಡೆಸಲಿದ್ದಾರೆ’ ಎಂದಿದ್ದಾರೆ.

‘100 ಜನ್ಮ ಎತ್ತಿದರೂ ಆಗುವುದಿಲ್ಲ’

ಜಮ್ಮು: ದಿಗ್ವಿಜಯ್ ಹೇಳಿಕೆ ವಿರುದ್ಧ ಜಮ್ಮು ಕಾಶ್ಮೀರದ ಬಿಜೆಪಿ ಘಟಕದ ಅಧ್ಯಕ್ಷ ರವೀಂದ್ರ ರೈನಾ ವಾಗ್ದಾಳಿ ನಡೆಸಿದ್ದಾರೆ. ‘ಅವರು 100 ಜನ್ಮ ಎತ್ತಿಬಂದರೂ ಕಾಂಗ್ರೆಸ್ ಮುಖಂಡರು ಭಾರತದ ವಿರುದ್ಧ ಹೂಡಿರುವ ಸಂಚಿನಲ್ಲಿ ಯಶಸ್ವಿಯಾಗಲು ನಮ್ಮ ಪಕ್ಷ ಅವಕಾಶ ನೀಡುವುದಿಲ್ಲ’ ಎಂದಿದ್ದಾರೆ.

ಪಾಕಿಸ್ತಾನ, ಪ್ರತ್ಯೇಕತಾವಾದಿಗಳು ಮತ್ತು ಭಯೋತ್ಪಾದಕರೊಂದಿಗೆ ವಿರೋಧ ಪಕ್ಷವು ಕೈಜೋಡಿಸಿದೆ ಎಂದು ರೈನಾ ಆರೋಪಿಸಿದ್ದಾರೆ. ಭಾರತ ಮಾತೆಯ ಬೆನ್ನಿಗೆ ಚೂರಿ ಹಾಕುವರನ್ನು ರಾಷ್ಟ್ರವು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.