ADVERTISEMENT

ಮಮತಾ ಮೇಲಿನ ಹಲ್ಲೆ ‘ನಾಟಕ’, ಸಿಬಿಐ ತನಿಖೆಯಾಗಲಿ: ಬಿಜೆಪಿ

ಪಿಟಿಐ
Published 11 ಮಾರ್ಚ್ 2021, 8:40 IST
Last Updated 11 ಮಾರ್ಚ್ 2021, 8:40 IST
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್   

ಕೋಲ್ಕತ್ತ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ನಡೆದಿರುವ ಹಲ್ಲೆ ಒಂದು ‘ನಾಟಕ‘ವಾಗಿದ್ದು, ಈ ಘಟನೆ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಒತ್ತಾಯಿಸಿದ್ದಾರೆ.

‘ಇದೊಂದು ನಾಟಕ. ಇಂಥ ಘಟನೆಗಳಿಂದ ಮತಗಳಿಸಲು ಸಾಧ್ಯವಿಲ್ಲ. ನಾವು ಇಂಥವನ್ನೆಲ್ಲ ಈ ಮೊದಲೇ ನೋಡಿದ್ದೇವೆ‘ ಎಂದು ಅವರು ಗುರುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

‘ಅಲ್ಲಿ ನಿಜವಾಗಿ ಏನು ನಡೆಯಿತು ಎಂಬುದರ ಬಗ್ಗೆ ತನಿಖೆ ನಡೆಸಬೇಕಾಗಿದೆ. ಮುಖ್ಯಮಂತ್ರಿಯವರಿಗೆ ಝಡ್-ಪ್ಲಸ್ ಭದ್ರತೆ ಇದ್ದರೂ ಹೇಗೆ ದಾಳಿ ನಡೆಯಿತು ಎಂಬುದನ್ನು ಪರಿಶೀಲಿಸಬೇಕಾಗಿದೆ. ಘಟನೆಯ ಸತ್ಯಾಸತ್ಯತೆ ಹೊರ ತರಲು ರಾಜ್ಯ ಸರ್ಕಾರ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು‘ ಎಂದು ಅವರು ಹೇಳಿದರು.

ADVERTISEMENT

ಮಮತಾ ಬ್ಯಾನರ್ಜಿಯವರು ಆಸ್ಪತ್ರೆಯಲ್ಲಿ ಕಾಲಿಗೆ ಪ್ಲ್ಯಾಸ್ಟರ್‌ ಹಾಕಿಕೊಂಡು ಮಲಗಿರುವ ಫೋಟೊಗಳನ್ನು ಉಲ್ಲೇಖಿಸಿದ ಘೋಷ್, ‘ಇದು ನೈಜ ಘಟನೆಯೋ ಅಥವಾ ನಾಟಕವೋ ಎಂದು ನೋಡಬೇಕಾಗಿದೆ‘ ಎಂದರು.

‘ಇಂಥ ಘಟನೆಗಳ ಮೂಲಕ ಅನುಕಂಪದ ಮತಗಳನ್ನು ಗಳಿಸಲು ಸಾಧ್ಯವಿಲ್ಲ. ಯಾರನ್ನೂ ಸೋಲಿಸಲು ಸಾಧ್ಯವಿಲ್ಲ. ಈ ಬಾರಿ ಇಂಥ ಯಾವುದೇ ಘಟನೆಗಳು ಫಲಿತಾಂಶವನ್ನು ನೀಡುವುದಿಲ್ಲ‘ ಎಂದು ಘೋಷ್ ಹೇಳಿದರು.

‘ರಾಜ್ಯದ ಜನರು ಈ ರೀತಿಯ ನಾಟಕಗಳನ್ನು ಮೊದಲೇ ನೋಡಿದ್ದಾರೆ. ಅಧಿಕಾರ ದುರ್ಬಳಕೆ ಮಾಡಿಕೊಂಡು ಮತಗಳಿಸಲು ಯಾವುದೇ ಹಂತಕ್ಕೂ ಇಳಿಯಬಹುದು‘ ಎಂದು ಆರೋಪಿಸಿದರು.

ಮಮತಾ ದೂರ ಇಡುವ ವ್ಯವಸ್ಥಿತ ತಂತ್ರ

ಚುನಾವಣಾ ಪ್ರಚಾರ ಕಾರ್ಯದಿಂದ ಮಮತಾ ಅವರನ್ನು ದೂರ ಇಡುವ ವ್ಯವಸ್ಥಿತ ತಂತ್ರ ಇದು ಎಂದು ಟಿಎಂಸಿ ದೂರಿದೆ.

‘ಚುನಾವಣಾ ಪ್ರಚಾರದಲ್ಲಿ ಮಮತಾ ಪಾಲ್ಗೊಳ್ಳುವುದು ಹಲವರಿಗೆ ಇಷ್ಟವಿಲ್ಲ. ತಮ್ಮ ಹಾದಿಗೆ ಅಡ್ಡಲಾಗಿರುವ ಅವರನ್ನು ತೆರವುಗೊಳಿಸಲು ಅವರು ಬಯಸಿದ್ದಾರೆ. ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುವಷ್ಟರ ಮಟ್ಟಿಗೆ ಕೆಳಮಟ್ಟಕ್ಕೆ ಇಳಿದುದಕ್ಕೆ ಬಿಜೆಪಿಯವರು ತಮಗೆ ತಾವೇ ಹೇಸಿಗೆಪಟ್ಟುಕೊಳ್ಳಬೇಕು’ ಎಂದು ಪಕ್ಷದ ನಾಯಕ ಸುಗತ ರಾಯ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.