ಮುಂಬೈ: ಪಶ್ಚಿಮ ಘಟ್ಟದ ಉತ್ತರ ಭಾಗದಲ್ಲಿ ಹೊಸ ಪ್ರಭೇದದ ಸಸ್ಯವನ್ನು ಅರಣ್ಯ ಸಂರಕ್ಷಣಾವಾದಿಗಳ ತಂಡವೊಂದು ಗುರುತಿಸಿದೆ. ಬಿಎನ್‌ಎಚ್‌ಎಸ್, ಸತಾಯೆ ಕಾಲೇಜು ಮತ್ತು ಕ್ಯಾಮೆರಿನೊ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ತಂಡ ಹೊಸ ಪ್ರಭೇದಗಳನ್ನು ಗುರುತಿಸುವಲ್ಲಿ ಯಶಸ್ವಿಯಾಗಿದೆ.
ವೈಜ್ಞಾನಿಕವಾಗಿ ‘ಎಕೊನೊಪ್ಸ್ ಸಹ್ಯಾದ್ರಿಕಸ್’ ಎಂದು ಗುರುತಿಸಲಾಗಿರುವ ಈ ನೂತನ ಸಸ್ಯ ಪ್ರಭೇದ ಕುರಿತಂತೆ ಸಸ್ಯಶಾಸ್ತ್ರ ಸಂಬಂಧಿ ಅಂತರರಾಷ್ಟ್ರೀಯ ನಿಯತಕಾಲಿಕದಲ್ಲಿ ಲೇಖನ ಪ್ರಕಟಗೊಂಡಿದೆ. ಪಶ್ಚಿಮಘಟ್ಟದಲ್ಲಿ ಜೀವವೈವಿಧ್ಯ ಸಮೀಕ್ಷೆಯ ವೇಳೆ ಈ ಅನ್ವೇಷಣೆ ನಡೆದಿದೆ ಎಂದು ತಿಳಿಸಲಾಗಿದೆ. ತಂಡದ ನೇತೃತ್ವವನ್ನು ಬಿಎನ್‌ಎಚ್‌ಎಸ್ ಸಂರಕ್ಷಣಾಧಿಕಾರಿ ಹರ್ಷಲ್ ಭೋಂಸ್ಲೆ ವಹಿಸಿದ್ದರು. ತಂಡದಲ್ಲಿ ಸತಾಯೆ ಕಾಲೇಜಿನ ಸುಶಾಂತ್ ಮೋರೆ, ಕ್ಯಾಮೆರಿನೊ ವಿ.ವಿಯ ಫೇಬಿಯೊ ಕಾಂಟಿ ಇದ್ದರು.
ಯೋಜನೆಗೆ ಮುಂಬೈನ ಬೃಹತ್ ಭಾರತೀಯ ಸಮಾಜದ ಶ್ರೀಪಾದ ಹಲ್ಬೆ ಆರ್ಥಿಕ ನೆರವು ಒದಗಿಸಿದ್ದರು. ಇದುವರೆಗೂ ತಂಡವು ಕರ್ನಾಟಕ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಅನ್ವೇಷಣೆ ಕೈಗೊಂಡಿತ್ತು. ಹೊಸ ಸಸ್ಯ ಪ್ರಭೇದವನ್ನು ಆಗಸ್ಟ್ 2019ರಲ್ಲಿ ಗುರುತಿಸಿದ್ದು, ಆಳ ಅಧ್ಯಯನದ ನಂತರ ಪಶ್ಚಿಮ ಘಟ್ಟದ ಉತ್ತರ ಭಾಗದಲ್ಲಿ ಕಂಡುಬರುವ ಇದು ಹೊಸ ಸಸ್ಯ ಪ್ರಭೇದ ಎಂದು ಖಾತರಿಪಡಿಸಿಕೊಳ್ಳಲಾಯಿತು. ‘ಎಕೊನೊಪ್ಸ್ ಸಹ್ಯಾದ್ರಿಕಸ್’ ಸಸ್ಯ ಪ್ರಭೇದವು ಪಶ್ಚಿಮ ಘಟ್ಟದಲ್ಲಿ ಉತ್ತರದ ಸಲ್ಹೇರ್ (ನಾಸಿಕ್ ಜಿಲ್ಲೆ)ಯಿಂದ ದಕ್ಷಿಣದಲ್ಲಿ ಕೊಲ್ಹಾಪುರದವರೆಗೆ ಕಾಣಸಿಗಲಿದೆ. ಬೆಟ್ಟಗಳ ಇಳಿಜಾರು ಭಾಗದಲ್ಲಿ ಇದು ಬೆಳೆಯಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.