
ಭೂಪಾಲ್: ಮೊಘಲ್ ದೊರೆ ಬಾಬರ್ ಕುರಿತು ತಾವು ಬರೆದಿರುವ ಪುಸ್ತಕದ ಮೇಲಿನ ಚರ್ಚೆಯನ್ನು ರದ್ದುಗೊಂಡಿರುವ ಕುರಿತು ಲೇಖಕ ಆಭಾಸ್ ಮಾಲ್‌ದಾಹಿಯಾರ್ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಉದ್ದೇಶಿಸಿ ‘ಎಕ್ಸ್’ನಲ್ಲಿ ಪತ್ರ ಬರೆದಿರುವ ಅವರು ‘ಬಾಬರ್‌ನನ್ನು ವೈಭವೀಕರಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಪತ್ರಿಕೆಯೊಂದು ತಪ್ಪಾಗಿ ಪ್ರಕಟಿಸಿದೆ. ಇದರ ಆಧಾರದ ಮೇಲೆ ಕೆಲ ಹಿಂದೂ ಸಂಘಟನೆಗಳು ನನ್ನ ಪುಸ್ತಕವನ್ನು ಸುಟ್ಟು ಹಾಕುವ ಹಾಗೂ ಪುಸ್ತಕ ಮಳಿಗೆಗಳನ್ನು ಧ್ವಂಸಗೊಳಿಸುವುದಾಗಿ ಬೆದರಿಕೆ ಹಾಕಿವೆ. ಭೂಪಾಲ್ ಸಾಹಿತ್ಯ ಮತ್ತು ಕಲಾ ಉತ್ಸವದಲ್ಲಿ (ಬಿಎಲ್‌ಎಫ್) ಆಯೋಜಿಸಲಾಗಿದ್ದ ‘ಬಾಬರ್: ದಿ ಕ್ವೆಸ್ಟ್ ಫಾರ್ ಹಿಂದೂಸ್ತಾನ್’ ಪುಸ್ತಕದ ಕುರಿತ ಚರ್ಚೆಯನ್ನು ರದ್ದುಗೊಳಿಸಲಾಗಿದೆ’ ಎಂದಿದ್ದಾರೆ.
ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಆಭಾಸ್, ‘ಪುಸ್ತಕವನ್ನು ಓದದೇ, ‘ಸ್ವದೇಶ್’ ಪತ್ರಿಕೆಯು ವರದಿ ಪ್ರಕಟಿಸಿತು. ಇದರಿಂದ ಚರ್ಚೆಯು ರದ್ದಾಯಿತು. ಇದು ದುರದೃಷ್ಟಕರ’ ಎಂದು ಹೇಳಿದ್ದಾರೆ.
ತಾನು ಯಾವುದೇ ಲೇಖಕ ಅಥವಾ ಪುಸ್ತಕದ ವಿರುದ್ಧ ಆಕ್ಷೇಪ ಹೊಂದಿಲ್ಲ. ಪುಸ್ತಕದಲ್ಲಿ ಏನಿದೆ ಅಥವಾ ಏನಿಲ್ಲ ಎಂಬುದು ನಮಗೆ ಸಮಸ್ಯೆಯಲ್ಲ. ಆದರೆ ಈಗಾಗಲೇ ರಾಮ ಮಂದಿರ ನಿರ್ಮಾಣಗೊಂಡಿದೆ. ವಂದೇ ಮಾತರಂ ಗೀತೆಗೆ 150 ವರ್ಷ ಪೂರ್ಣಗೊಂಡಿವೆ. ಹೀಗೆ ದೇಶದಲ್ಲಿ ಹಲವಾರು ಸಕಾರಾತ್ಮಕ ವಿಷಯಗಳಿವೆ. ಹೀಗಿರುವಾಗ ಬಾಬರ್ ವಿಷಯವು ಅಪ್ರಸ್ತುತವಾಗಿದೆ ಎಂದು ‘ಸ್ವದೇಶ್’ ಪತ್ರಿಕೆಯು ಸ್ಪಷ್ಟಪಡಿಸಿದೆ.
ಅಲ್ಲದೇ ಆಭಾಸ್ ಇಚ್ಛಿಸಿದರೆ ಅವರ ಸ್ಪಷ್ಟನೆಯನ್ನೂ ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ ಎಂದೂ ಹೇಳಿದೆ.
ಬಲಪಂಥೀಯ ಸಂಘಟನೆಗಳು ಕಾರ್ಯಕ್ರಮವನ್ನು ವಿರೋಧಿಸುತ್ತಿದ್ದು, ವಿಧ್ವಸಂಕ ಕೃತ್ಯ ನಡೆಯುವ ಸಾಧ್ಯತೆ ಇರುವುದರ ಕುರಿತು ಪೊಲೀಸರು ಆಯೋಜಕರೊಂದಿಗೆ ಮಾತನಾಡಿದ್ದಾರೆ. ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಜ.9ರಿಂದ 11ರವರೆಗೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.