ADVERTISEMENT

ಅಡಿಕೆ ತೋಟಗಳಲ್ಲಿ ಎಲೆಚುಕ್ಕಿ ರೋಗ: ತಜ್ಞರ ಸಮಿತಿ ರಚನೆ

ಕರ್ನಾಟಕದಲ್ಲಿ 20 ಸಾವಿರ ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2022, 20:45 IST
Last Updated 23 ಅಕ್ಟೋಬರ್ 2022, 20:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕರ್ನಾಟಕದಲ್ಲಿ ಅಡಿಕೆ ತೋಟಗಳಲ್ಲಿ ಹಬ್ಬಿರುವ ಎಲೆ ಚುಕ್ಕಿ ರೋಗದ ಬಗ್ಗೆ ಅಧ್ಯಯನ ನಡೆಸಲು ಏಳು ತಜ್ಞರನ್ನು ಒಳಗೊಂಡ ಸಮಿತಿಯನ್ನು ಕೇಂದ್ರ ಕೃಷಿ ಸಚಿವಾಲಯ ರಚಿಸಿದೆ.

ಸಮಿತಿಯಲ್ಲಿ ಕಾಸರಗೋಡಿನ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆಯ (ಸಿಪಿಸಿಆರ್‌ಐ) ಭಾರತೀಯ ಕೃಷಿ ವಿಜ್ಞಾನ ಪರಿಷತ್‌ನ ನಿರ್ದೇಶಕಿ ಅನಿತಾ ಕರುಣ್‌, ಕಲ್ಲಿಕೋಟೆಯ ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯದ ನಿರ್ದೇಶಕ ಹನಿ ಚೆರಿಯನ್, ನಿರ್ದೇಶನಾಲಯದ ಉಪ ನಿರ್ದೇಶಕರಾದ ಫೆಮಿನಾ, ಸಿಪಿಸಿಆರ್‌ಐ ಬೆಳೆ ಉತ್ಪಾದನಾ ವಿಭಾಗದ ಮುಖ್ಯಸ್ಥ ರವಿ ಭಟ್‌, ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಎಂ.ವಾಲಿ, ತೋಟಗಾರಿಕೆ ಇಲಾಖೆಯ ದಕ್ಷಿಣ ಕನ್ನಡದ ಉಪನಿರ್ದೇಶಕ ಎಚ್‌.ಆರ್‌.ನಾಯ್ಕ್, ಸಿಪಿಸಿಆರ್‌ಐನ ಬೆಳೆ ಸಂರಕ್ಷಣಾ ವಿಭಾಗದ ಮುಖ್ಯಸ್ಥ ವಿನಾಯಕ ಹೆಗಡೆ ಇದ್ದಾರೆ.

‘ಸಮಿತಿಯು ಸಭೆಗಳನ್ನು ನಡೆಸಬಹುದು ಹಾಗೂ ಅಡಿಕೆಯ ಎಲೆ ಚುಕ್ಕಿ ರೋಗದ ಸಮಸ್ಯೆ ಬಗೆಹರಿಸಲು ಕಾರ್ಯತಂತ್ರಗಳನ್ನು ರೂಪಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿಗಳ ಜತೆಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ಕಳೆದ ವಾರ ಸಭೆ ನಡೆಸಿ ರೋಗದ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಸೂಚಿಸಿದ್ದರು.

ಕರ್ನಾಟಕದಲ್ಲಿ ಎಲೆಚುಕ್ಕಿ ರೋಗದಿಂದಾಗಿ 20 ಸಾವಿರ ಹೆಕ್ಟೇರ್‌ನಷ್ಟು ಅಡಿಕೆ ತೋಟಕ್ಕೆ ಹಾನಿಯಾಗಿದೆ. ಈ ರೋಗದ ಬಗ್ಗೆ ಅಧ್ಯಯನಕ್ಕೆ ವಿಜ್ಞಾನಿಗಳ ತಂಡ ಕಳುಹಿಸಿಕೊಡಬೇಕು ಎಂದು ಕರ್ನಾಟಕದ ಅಡಿಕೆ ಬೆಳೆಗಾರರ ನಿಯೋಗವು ಕೇಂದ್ರ ಸರ್ಕಾರಕ್ಕೆ ಕಳೆದ ಬುಧವಾರ ಮನವಿ ಸಲ್ಲಿಸಿತ್ತು.

ಗೃಹ ಸಚಿವ ಆರಗ ಜ್ಞಾನೇಂದ್ರ, ಶಾಸಕ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ನಿಯೋಗವು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತ್ತು.

‘ದೇಶದಲ್ಲಿ 12 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ವಾರ್ಷಿಕ ವಹಿವಾಟು ₹5,400 ಕೋಟಿ ಆಗಿದೆ. ಕರ್ನಾಟಕದಲ್ಲಿ ₹4,300 ಕೋಟಿ ಮೌಲ್ಯದ 9.5 ಲಕ್ಷ ಟನ್‌ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಯು 50 ಲಕ್ಷ ಜನರಿಗೆ ಜೀವನೋಪಾಯವನ್ನು ಒದಗಿಸುತ್ತಿದೆ.ಕಳೆದ ಕೆಲವು ವರ್ಷಗಳಿಂದ ಅಡಿಕೆಗೆ ಉತ್ತಮ ಬೆಲೆ ದೊರಕುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಂಡಿರುವ ಈ ರೋಗದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ತಿಳಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.