ADVERTISEMENT

ದಿಶಾ ರವಿಗೆ ಬೆಂಬಲ ಸೂಚಿಸಿದ ಕಾಂಗ್ರೆಸ್, ವಿಪಕ್ಷ ನಾಯಕರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಫೆಬ್ರುವರಿ 2021, 3:51 IST
Last Updated 15 ಫೆಬ್ರುವರಿ 2021, 3:51 IST
ಪರಿಸರ ಕಾರ್ಯಕರ್ತೆ ದಿಶಾ ರವಿ (ಸಂಗ್ರಹ ಚಿತ್ರ)
ಪರಿಸರ ಕಾರ್ಯಕರ್ತೆ ದಿಶಾ ರವಿ (ಸಂಗ್ರಹ ಚಿತ್ರ)   

ಬೆಂಗಳೂರು: ರೈತರ ಪ್ರತಿಭಟನೆಗೆ ಸಂಬಂಧಪಟ್ಟಂತೆ 'ಟೂಲ್‌ಕಿಟ್' ಸಿದ್ಧಪಡಿಸಿದ್ದ ಆರೋಪದಲ್ಲಿ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನವನ್ನುಕಾಂಗ್ರೆಸ್ ಹಾಗೂ ವಿಪಕ್ಷಗಳು ಬಲವಾಗಿ ಖಂಡಿಸಿದೆ.

ದಿಶಾ ರವಿಗೆ ಸಂಪೂರ್ಣ ಬೆಂಬಲವನ್ನು ಸೂಚಿಸಿರುವ ವಿರೋಧ ಪಕ್ಷದ ನಾಯಕರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಹುನ್ನಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ ಆದಷ್ಟು ಬೇಗನೇ ದಿಶಾ ರವಿ ಅವರನ್ನು ಬಿಡುಗಡೆಗೊಳಿಸಲು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಹಣಕಾಸು ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡ ಪಿ. ಚಿದಂಬರಂ, 'ದಿಶಾ ರವಿ ಬಂಧನವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸರ್ವಾಧಿಕಾರಿ ಧೋರಣೆಯ ಆಡಳಿತದ ವಿರುದ್ಧ ಪ್ರತಿಭಟಿಸಲು ಎಲ್ಲಾ ವಿದ್ಯಾರ್ಥಿಗಳು ಹಾಗು ಯುವ ಜನತೆ ಒಗ್ಗೂಡಿ ಧ್ವನಿ ಎತ್ತಬೇಕೆಂದು ಕೋರುತ್ತೇನೆ' ಎಂದು ಮನವಿ ಮಾಡಿದರು.

ದಿಶಾ ರವಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ಸಂಸದ ಜೈರಾಮ್ ರಮೇಶ್, 'ಇದು ನೀಚ ಕೃತ್ಯ. ಇದು ಅನಪೇಕ್ಷಿತ ಕಿರುಕುಳ ಬೆದರಿಕೆ' ಎಂದು ಆರೋಪಿಸಿದ್ದಾರೆ.

ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಸಹ ಸ್ವರ ಎತ್ತಿದ್ದು, 'ಮೋದಿ ಆಡಳಿತವು ರೈತರ ಮೊಮ್ಮಗಳನ್ನು ದೇಶದ್ರೋಹದ ಆರೋಪದಡಿಯಲ್ಲಿ ಬಂಧಿಸುವ ಮೂಲಕ ಹೋರಾಟವನ್ನು ದುರ್ಬಲಗೊಳಿಸಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ವಾಸ್ತವವಾಗಿ, ಇದರಿಂದ ಯುವಜನತೆ ಮತ್ತಷ್ಟು ಜಾಗೃತರಾಗಲಿದ್ದು, ಪ್ರಜಾಪ್ರಭುತ್ವ ಹೋರಾಟವನ್ನು ಬಲಗೊಳಿಸಲಿದ್ದಾರೆ' ಎಂದು ಹೇಳಿದರು.

ಕಾಂಗ್ರೆಸ್ ನಾಯಕ ಶಶಿ ತರೂರ್, ಡೈಲಿ ಟೆಲಿಗ್ರಾಫ್ ಸುದ್ದಿಯನ್ನು ಉಲ್ಲೇಖಿಸುತ್ತಾ, 'ದಿಶಾ ರವಿ ಬಂಧನವು ದೇಶದ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಜಕೀಯ ಭಿನ್ನಾಭಿಪ್ರಾಯದ ಮೇಲಿನ ದೌರ್ಜನ್ಯವಾಗಿದ್ದು, ರೈತರ ಪ್ರತಿಭಟನೆಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದ್ದಾರೆ.

ಕೇಂದ್ರ ಮಾಜಿ ಸಚಿವ ಆನಂದ್ ಶರ್ಮಾ ಕೂಡಾ 'ದಿಶಾ ರವಿ ಅವರ ಬಂಧನ ಅತ್ಯಂತ ದುರದೃಷ್ಟಕರ ಹಾಗೂ ಆಘಾತಕಾರಿ ಎಂದು ಹೇಳಿದ್ದಾರೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಯುವತಿಯ ಬಂಧನ ಹಾಗೂ ವಿಚಾರಣೆಯನ್ನು ಸಮರ್ಥಿಸಲಾಗುವುದಿಲ್ಲ' ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದಕ್ಕೆ ಸಂಬಂಧಪಟ್ಟಂತೆ 'ಟೂಲ್‌ಕಿಟ್' ಸಿದ್ಧಪಡಿಸಿದ್ದ ಆರೋಪದಲ್ಲಿ ಬೆಂಗಳೂರಿನ 21 ವರ್ಷ ವಯಸ್ಸಿನ ಪರಿಸರ ಕಾರ್ಯಕರ್ತೆ ದಿಶಾ ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ರೈತರ ಪ್ರತಿಭಟನೆಯನ್ನು ಬೆಂಬಲಿಸಲು ದಿಶಾ ರವಿ ಟೂಲ್‌ಕಿಟ್ ಸಿದ್ಧಪಡಿಸಿ ಬಳಿಕ ಅದನ್ನು ತಿದ್ದಿದ್ದರು ಎಂದು ಆರೋಪಿಸಲಾಗಿದೆ.ದಿಶಾ ರವಿ ವಿರುದ್ಧ ದೇಶದ್ರೋಹ, ಜನರ ನಡುವೆ ದ್ವೇಷಕ್ಕೆ ಕುಮ್ಮಕ್ಕು ಮತ್ತು ಅಪರಾಧ ಒಳಸಂಚಿಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಸೇರಿದಂತೆ ಹಲವು ಗಣ್ಯರು ಈ ಟೂಲ್‌ಕಿಟ್ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿದ್ದರು.ಜನವರಿ 26 ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಭಾರಿ ಹಿಂಸಾಚಾರ ನಡೆದಿತ್ತು. ಅಲ್ಲದೆ ಗುಂಪೊಂದು ಕೆಂಪುಕೋಟೆಗೆ ನುಗ್ಗಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.