ADVERTISEMENT

ಲೋಕಸಭಾ ಸದಸ್ಯತ್ವದಿಂದ ರಾಹುಲ್‌ ಅನರ್ಹತೆ: ಕಾಂಗ್ರೆಸ್‌ನಿಂದ ಎಚ್ಚರಿಕೆಯ ಹೆಜ್ಜೆ

ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್‌ ಗಾಂಧಿಗೆ ಜೈಲುಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2023, 5:04 IST
Last Updated 2 ಏಪ್ರಿಲ್ 2023, 5:04 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ಮಾನನಷ್ಟ ಮೊಕದ್ದಮೆಯಲ್ಲಿ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರಿಗೆ ಸೂರತ್‌ನ ನ್ಯಾಯಾಲಯವು ಜೈಲುಶಿಕ್ಷೆ ವಿಧಿಸಿ ನೀಡಿರುವ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ವಿಷಯದಲ್ಲಿ ಕಾಂಗ್ರೆಸ್‌ ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದೆ.

ರಾಹುಲ್‌ ವಿರುದ್ಧ ದೇಶದ ವಿವಿಧ ನ್ಯಾಯಾಲಯಗಳಲ್ಲಿ ಮತ್ತಷ್ಟೂ ಪ್ರಕರಣಗಳು ದಾಖಲಾಗುತ್ತಿವೆ. ಇಂಥ ಸಮಯದಲ್ಲಿ ಮೇಲ್ಮನವಿಯಲ್ಲಿನ ಯಾವುದಾದರೂ ದೋಷವೊಂದು ರಾಹುಲ್‌ ಗಾಂಧಿ ಅವರನ್ನು ಮತ್ತಷ್ಟೂ ಸಂಕಷ್ಟಕ್ಕೆ ದೂಡಬಾರದು ಎಂಬ ಕಾರಣಕ್ಕೆ ಕಾಂಗ್ರೆಸ್‌ ಈ ನಿಲುವು ಬಂದಿದೆ ಎಂದು ಮೂಲಗಳು ಹೇಳಿವೆ.

‘ಎಲ್ಲ ಕಳ್ಳರಿಗೂ ಮೋದಿ ಎಂಬ ಉಪನಾಮ ಏಕಿದೆ’ ಎಂದು ರಾಹುಲ್‌ ಅವರು ಪ್ರಶ್ನಿಸಿದ್ದರು. ಲೋಕಸಭೆಗೆ 2019ರಲ್ಲಿ ನಡೆದ ಚುನಾವಣಾ ಪ್ರಚಾರ ಸಂದರ್ಭದಲ್ಲಿ ರಾಹುಲ್‌ ಅವರು ಕೋಲಾರದಲ್ಲಿ ಮಾಡಿದ ಭಾಷಣದಲ್ಲಿ ಈ ಹೇಳಿಕೆ ಕೊಟ್ಟಿದ್ದರು. ಅದನ್ನು ಪ್ರಶ್ನಿಸಿ ಸೂರತ್‌ (ಪಶ್ಚಿಮ) ಕ್ಷೇತ್ರದ ಶಾಸಕ ಪೂರ್ಣೇಶ್‌ ಮೋದಿ ಅವರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ADVERTISEMENT

ಅರ್ಜಿ ವಿಚಾರಣೆ ನಡೆಸಿದ್ದ ಸೂರತ್‌ ನ್ಯಾಯಾಲಯವು ರಾಹುಲ್‌ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹಿರಿಯ ಸಂಸದ ಅಭಿಷೇಕ್‌ ಮನು ಸಿಂಘ್ವಿ ನೇತೃತ್ವದ ವಕೀಲರ ತಂಡವು, ಸೂರತ್‌ ನ್ಯಾಯಾಲಯ ನೀಡಿರುವ ಆದೇಶದ ವಿರುದ್ಧ ಶೀಘ್ರವೇ ಮೇಲ್ಮನವಿ ಸಲ್ಲಿಸಲಿದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಹೇಳಿವೆ.

ಆದರೆ, ಮೇಲ್ಮನವಿ ಸಲ್ಲಿಸುವ ವಿಚಾರದಲ್ಲಿ ಈ ತಂಡವು ಅವಸರದ ಕ್ರಮ ಅನುಸರಿಸದೇ ಇರಲು ನಿರ್ಧರಿಸಿದೆ. ಅಲ್ಲದೇ, ಯಾವುದೇ ನ್ಯೂನತೆಗಳು ಇಲ್ಲದಂತೆ ಅರ್ಜಿ ಸಿದ್ಧಪಡಿಸಲಾಗುತ್ತಿದೆ ಎಂದೂ ಹೇಳಿವೆ.

ಏಪ್ರಿಲ್‌ 12ರಂದು ತನ್ನ ಮುಂದೆ ಹಾಜರಾಗುವಂತೆ ರಾಹುಲ್‌ ಅವರಿಗೆ ಪಟ್ನಾದ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿದೆ. ಇದೇ ವಿಷಯಕ್ಕೆ ಸಂಬಂಧಿಸಿ ರಾಂಚಿಯಲ್ಲಿಯೂ ಪ್ರಕರಣವೊಂದು ದಾಖಲಾಗಿದೆ.

‘ಸೂರತ್‌ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗುವ ಮೇಲ್ಮನವಿಯು ಸಾರ್ವಜನಿಕ ದಾಖಲೆ ಎನಿಸುತ್ತದೆ. ಹೀಗಾಗಿ, ಪಟ್ನಾ, ರಾಂಚಿ ಸೇರಿದಂತೆ ಬೇರಾವುದೇ ಕೋರ್ಟ್‌ನಲ್ಲಿ ವಾದ ಮಂಡಿಸುವ ವೇಳೆ, ರಾಹುಲ್‌ ವಿರೋಧಿಗಳು ಈ ಮೇಲ್ಮನವಿಯನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ, ಯಾವುದೇ ತಪ್ಪುಗಳು ಇಲ್ಲದಂತಹ ಮೇಲ್ಮನವಿಯನ್ನು ಸಿದ್ಧಪಡಿಸಲು ವಕೀಲರ ತಂಡವು ಮುಂದಾಗಿದೆ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರೊಬ್ಬರು ಹೇಳಿದರು.

ಆದರೆ, ಮೇಲ್ಮನವಿ ಸಲ್ಲಿಸುವ ವಿಷಯದಲ್ಲಿನ ವಿಳಂಬವನ್ನೇ ಅಸ್ತ್ರವನ್ನಾಗಿಸಿಕೊಂಡಿರುವ ಬಿಜೆಪಿ, ‘ರಾಹುಲ್‌ ಅವರನ್ನು ಜೈಲಿನಲ್ಲಿರಿಸುವ ಉದ್ದೇಶದಿಂದಲೇ ಕಾಂಗ್ರೆಸ್‌ ಈ ವಿಳಂಬ ತಂತ್ರ ಅನುಸರಿಸುತ್ತಿದೆ’ ಎಂದು ಆರೋಪಿಸುತ್ತಲೇ ಇದೆ.

ಕಾಂಗ್ರೆಸ್‌ನ ಮತ್ತೊಬ್ಬ ಮುಖಂಡರೊಬ್ಬರು, ‘ರಾಹುಲ್‌ ಅವರು ಭಾಷಣ ಮಾಡಿದ್ದು ಕರ್ನಾಟಕದ ಕೋಲಾರದಲ್ಲಿ, ಆದರೆ, ಅದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಯನ್ನು ಸೂರತ್‌ನಲ್ಲಿ ನಡೆಸಿದ್ದು ಹೇಗೆ ಎಂಬುದು ಪಕ್ಷದ ಪ್ರಶ್ನೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.